ಬೆನ್ನು ನೋವು ಮತ್ತು ಡಿಸ್ಕ್‍ಏಕ್ಟಮಿ ಕುರಿತು ಯಶಸ್ವಿ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಆ.26:- ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಕೆಳಭಾಗದ ಬೆನ್ನು ನೋವು ಮತ್ತು ಡಿಸ್ಕ್‍ಏಕ್ಟಮಿ ಕುರಿತು ಯಶಸ್ವಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಿತು.
ಈ ಕಾರ್ಯಕ್ರಮವು ಸಾಮಾನ್ಯ ಆರೋಗ್ಯ ಸಮಸ್ಯೆಯಾದ ಬೆನ್ನು ನೋವಿನ ಬಗ್ಗೆ ವಿವರಣೆ ನೀಡಲು ರೋಗಿಗಳು ಮತ್ತು ವೈದ್ಯಕೀಯ ತಜ್ಞರನ್ನು ಒಂದು ಕಡೆ ಸೇರಿಸಿತು. ಬೆನ್ನುಮೂಳೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವ್ಯಾಪಕ ಅನುಭವ ಹೊಂದಿರುವ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಡಾ. ಮಕ್ಸೂದ್ ಅಹ್ಮದ್, ಸೀನಿಯರ್ ಕನ್ಸಲ್ಟೆಂಟ್ ನ್ಯೂರೊಸರ್ಜರಿ ಮತ್ತು ಶ್ರೀ ಅಬ್ದುಲ್ ಫೈಸಲ್, ಫಿಸಿಯೋಥೆರಪಿ ವಿಭಾಗ, ಇವರು ಕಾರ್ಯಕ್ರಮದ ಉಸ್ತುವಾರಿ ವಹಿಸಿ ಭಾಗವಹಿಸಿದವರೊಂದಿಗೆ ಸಮಾಲೋಚನೆ ನಡೆಸಿದರು.
ಕೆಳಭಾಗದ ಬೆನ್ನು ನೋವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದ್ದು, ದೀರ್ಘಾವಧಿಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ ಮತ್ತು ದೈನಂದಿನ ಚಟುವಟಿಕೆಗಳನ್ನು ಕಠಿಣಗೊಳಿಸುತ್ತದೆ. ಸಾಂಪ್ರದಾಯಿಕ ಚಿಕಿತ್ಸೆಗಳು ಕೆಲಸ ಮಾಡದಿದ್ದ ಸಮಯದಲ್ಲಿ ಈ ಸಮಸ್ಯೆಯನ್ನು ನಿಭಾಯಿಸುವುದು ತುಂಬಾ ಮುಖ್ಯವಾಗಿದೆ. ಡಿಸ್ಕ್‍ಏಕ್ಟಮಿ ಒಂದು ಸರಳವಾದ, ಕಡಿಮೆ ಅಪಾಯಕಾರಿ ಶಸ್ತ್ರಚಿಕಿತ್ಸೆಯಾಗಿದ್ದು, ಡಿಸ್ಕ್ ಹರ್ನಿಯೇಷನ್ ಅಥವಾ ಸಂಬಂಧಿತ ಪರಿಸ್ಥಿತಿಗಳಿಂದಾಗಿ ತೀವ್ರವಾದ ಬೆನ್ನುನೋವನ್ನು ಅನುಭವಿಸುತ್ತಿರುವ ಜನರಿಗೆ ಉತ್ತಮ ಚಿಕಿತ್ಸೆಯಾಗಿದೆ.
ಬೆನ್ನುನೋವಿನಿಂದ ಬಳಲುತ್ತಿರುವ ಸುಮಾರು 121 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ.ಮಕ್ಸೂದ್ ಅಹಮದ್ ಬೆನ್ನುನೋವಿಗೆ ಕಾರಣವೇನು ಎಂಬುದರ ಕುರಿತು ತಿಳಿವಳಿಕೆ ನೀಡಿದರು, ಆ ಮೂಲಕ ಉತ್ತಮ ಭಂಗಿ ಮತ್ತು ನೋವು ಉಲ್ಬಣಗೊಳ್ಳುವುದನ್ನು ತಡೆಯಲು ಆರಂಭಿಕ ಹಂತದ ಚಿಕಿತ್ಸೆಯ ಮಹತ್ವವನ್ನು ಎತ್ತಿ ಹೇಳಿದರು. ಡಿಸ್ಕ್‍ಏಕ್ಟಮಿಯಂತಹ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಲು ಸುಧಾರಿತ ವೈದ್ಯಕೀಯ ಸೌಲಭ್ಯಗಳು ಮತ್ತು ಅನುಭವಿ ಶಸ್ತ್ರಚಿಕಿತ್ಸಕರ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು.