ಜಿಂದಾಲ್‍ಗೆ ಭೂಮಿ ನೀಡಿದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಲಿ: ಹೆಚ್.ವಿಶ್ವನಾಥ್
ಸಂಜೆವಾಣಿ ನ್ಯೂಸ್
ಮೈಸೂರು: ಆ.26:- ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಯಲ್ಲಿ 3,667 ಎಕರೆ ಭೂಮಿ ಮಾರಾಟ ಮಾಡಿದ್ದು, ಜನವಿರೋಧಿ ನೀತಿಯ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಒತ್ತಾಯಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಸರ್ಕಾರದ ಭೂಮಿಯನ್ನು ಮಾರಾಟ ಮಾಡುವುದಕ್ಕೆ ಮೊದಲಿನಿಂದಲೂ ವಿರೋಧ ಮಾಡಿಕೊಂಡು ಬಂದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿರುವುದು ದೊಡ್ಡ ಮಟ್ಟದ ಅನುಮಾನ ಉಂಟು ಮಾಡಿದೆ ಎಂದು ಆರೋಪಿಸಿದರು.
3667 ಎಕರೆಯಲ್ಲಿ ಎರಡು ಸಾವಿರ ಎಕರೆ ಭೂಮಿಯನ್ನು 1.20 ಲಕ್ಷ ರೂ.ಗೆ ಮತ್ತು 1667 ಎಕರೆಯನ್ನು 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಈ ಭೂಮಿಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಐರನ್,ಮಿನರಲ್ಸ್ ಕಂಟೆಟ್ ಇದೆ. ಅತ್ಯುತ್ತಮ ಓರಲ್ಸ್ ಸಿಗುವ ಶೇ.62ರಷ್ಟು ಈಲ್ಡ್ ಬರುವ ಭೂಮಿಯನ್ನು ಜಿಂದಾಲ್ ಕಂಪನಿಗೆ ಏಕಪಕ್ಷೀಯವಾಗಿ ಮಾರಾಟ ಮಾಡಲಾಗಿದೆ. ಸಾರ್ವಜನಿಕ ಚರ್ಚೆ ಮತ್ತು ಭೂಮಿ ಮಾರಾಟ ಮಾಡುವ ಮುನ್ನ ವಿಸ್ತ್ರೃತವಾಗಿ ಚರ್ಚೆಮಾಡದೆ ನಿರ್ಧರಿಸಿರುವುದನ್ನು ನೋಡಿದರೆ ಸಂಶಯ ಉಂಟಾಗುತ್ತಿದೆ ಎಂದರು.
ಐರನ್ ಹೆಚ್ಚಿರುವ ಈ ಭೂಮಿಗೆ ಯಾವುದೇ ಮೌಲ್ಯವನ್ನು ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ. 2017ರಲ್ಲಿ ಕಾನೂನು ಸಚಿವಾಲಯವು ಭೂಮಿಯ ಮೌಲ್ಯ, ಒಳಗೆ ಇರುವ ಅದಿರು ಪ್ರಮಾಣ ನೋಡಿ ಭೂಮಿಯನ್ನು ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ನಂತರ, ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಖಾಸಗಿ ಕಂಪನಿಗೆ ಪರಭಾರೆ ಮಾಡಿದ್ದಾರೆ. ಇದೊಂದು ಜನವಿರೋಧಿ ಮತ್ತು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿರುವ ಕಾರಣ ಸಿದ್ದರಾಮಯ್ಯ ಬಾಯಿ ತೆರೆದು ಮಾತನಾಡಬೇಕು ಎಂದು ಆಗ್ರಹಿಸಿದರು.
ಜಿಂದಾಲ್ ಕಂಪನಿಗೆ ಭೂಮಿ ಕೊಡುವ ವಿಚಾರದಲ್ಲಿ ತೀರ್ಮಾನ ಮಾಡದೆ ಜಂಟಿ ಸದನ ಸಮಿತಿಯ ಮುಂದಿಡಲು ನಾನು ಹೇಳಿದ್ದೆ. ಈ ವಿಚಾರದಲ್ಲಿ ತರಾತುರಿ ಬೇಡ. ಸರ್ಕಾರದ,ಜನರ ಆಸ್ತಿಯಾಗಿದೆ. ಇದನ್ನು ಜಂಟಿ ಸದನ ಸಮಿತಿ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವ ಮಾತನ್ನು ಹೇಳಿದ್ದರೂ ಇಂತಹ ನಿರ್ಧಾರ ಆಗಿರುವುದರಿಂದ ತಕ್ಷಣವೇ ಸಿಎಂ ಜನರ ಮುಂದೆ ಸತ್ಯ ಹೇಳಬೇಕು ಎಂದು ಆಗ್ರಹಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಕಡತಗಳನ್ನು ಹೆಲಿಕಾಪ್ಟರ್‍ನಲ್ಲಿ ಬಂದು ತೆಗೆದುಕೊಂಡು ಹೋಗಿದ್ದಾರೆ. ಮುಡಾಗೆ ಇಷ್ಟೊಂದು ಭದ್ರತೆ ಕೊಡುತ್ತಿರುವುದು ಯಾಕೆ. ಮುಡಾಕ್ಕೆ ಪ್ರತಿ ತಿಂಗಳು ಐದು ಕೋಟಿ ರೂ. ಸಂಬಳ,ಖರ್ಚು,ವೆಚ್ಚಕ್ಕೆ ಬೇಕು. ರೀಡು ವಿಚಾರದಲ್ಲಿ ಕೆಂಪಣ್ಣ ಏಕಸದಸ್ಯ ಆಯೋಗದ ವರದಿ ಬಿಡುಗಡೆ ಮಾಡಬೇಕು ಎಂದು ಹೇಳಿದರು. ಕೆಂಪಣ್ಣ ಏಕ ಸದಸ್ಯ ಆಯೋಗದ ವರದಿ ಬಿಡುಗಡೆ ಮಾಡಿದರೆ ಸಿಎಂ ಸಿದ್ದರಾಮಯ್ಯರ ಪಂಚೆ, ಶರ್ಟು ಎಲ್ಲಾ ಮಸಿಯಾಗೋದು ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿರುವುದನ್ನ ಸಾಹಿತಿಗಳು ಖಂಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇವರೆಲ್ಲ ಸರ್ಕಾರಿ ಸಾಹಿತಿಗಳು. ಇವರೆಲ್ಲ ಸರ್ಕಾರದ ಮರ್ಜಿನಲ್ಲಿ ಇರೋರು. ಚಿಂತಕರುಗಳು ಈಗ ಎಲ್ಲಿದ್ದಾರೆ. ತಪ್ಪನ್ನು ತಪ್ಪು ಎಂದು ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.