ಬೋಗಸ್ ಸಂಘ ಸಂಸ್ಥೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು: ಬನ್ನೂರು ರಾಜು
ಸಂಜೆವಾಣಿ ನ್ಯೂಸ್
ಮೈಸೂರು: ಆ.26:– ಸರ್ಕಾರದ ನೆರವು ಮತ್ತು ಸವಲತ್ತುಗಳನ್ನು ದುರುಪಯೋಗ ಮಾಡಿ ಕೊಳ್ಳುವುದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರು ವ ನಕಲಿ ಸಂಘ ಸಂಸ್ಥೆಗಳಿಗೆ ಸರ್ಕಾರ ಕಡಿವಾಣ ಹಾಕಿ ಅವುಗಳನ್ನು ಕಪ್ಪು ಪಟ್ಟಿಯಲ್ಲಿಟ್ಟು ಕ್ರಿಯಾಶೀಲತೆಯಿಂದ ನಾಡಿನಲ್ಲಿ ಪ್ರಾಮಾಣಿಕವಾಗಿ ಸಮಾಜೋಪಯೋಗಿ ಕೆಲಸ ಮಾಡುತ್ತಿರುವ ನಿಜವಾದ ಅಸಲಿ ಸಂಘ ಸಂಸ್ಥೆಗಳನ್ನು ಪೆÇ್ರೀತ್ಸಾಹಿಸಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಹೇಳಿದರು.
ನಗರದ ಪ್ರತಿಷ್ಠಿತ ಸೇವಾ ಸಂಸ್ಥೆಗಳಲ್ಲೊಂದಾದ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ತನ್ನ 25 ನೇ ವರ್ಷದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಇಂದು ಏರ್ಪಡಿಸಿದ್ದ ಪ್ರಜ್ಞಾ ರಂಗೋತ್ಸವ -2024ರ ಶೀರ್ಷಿಕೆಯಡಿಯಲ್ಲಿನ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಪ್ಪತೈದು ವರ್ಷಗಳ ಸುದೀರ್ಘ ಕಾಲದಿಂದಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕ್ರಿಯವಾಗಿರುವ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ,ಜನಪದ, ಸಂಸ್ಕೃತಿ, ಶಿಕ್ಷಣ, ನಾಟಕ ಸೇರಿದಂತೆ ಅನೇಕ ಆಯಾಮಗಳಲ್ಲಿ ಬಹುಮುಖಿ ಸೇವೆ ಸಲ್ಲಿಸುತ್ತಿರುವ ನಾಡಿನ ಅದರಲ್ಲೂ ವಿಶೇಷವಾಗಿ ಮೈಸೂರಿನ ಹೆಮ್ಮೆಯ ಸಂಸ್ಥೆಯೆಂದರು.
ಪ್ರಜ್ಞೆ ಎಂಬುದು ಪ್ರತಿಯೊಬ್ಬರಲ್ಲೂ ಪ್ರತಿಯೊಂದು ವಿಚಾರದಲ್ಲೂ, ಪ್ರತಿಕ್ಷಣವೂ ಜಾಗೃತವಾಗಿರಬೇಕು. ಇಂತಹ ಜಾಗೃತಿಯ ಸಂಕೇತವಾಗಿ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಳೆದ ಎರಡೂವರೆ ದಶಕಗಳ ಹಿಂದೆಯೇ ಸೋಸಲೆ ಸಿದ್ದರಾಜು ಅವರಂತಹ ಉತ್ಸಾಹಿ ಯುವ ಮನಸ್ಸುಗಳ ತಂಡದಿಂದ ಜನ್ಮ ತಾಳಿದ್ದು, ಈ ದಿಸೆಯಲ್ಲಿ ಪ್ರಜ್ಞಾಪೂರ್ವಕವಾಗಿ ಈ ಸಂಸ್ಥೆ ಅನೇಕ ಸಾರ್ಥಕ ಕೆಲಸಗಳನ್ನು ಮಾಡಿದೆ. ಒಂದು ಕ್ಷೇತ್ರ ಮಾತ್ರವಲ್ಲದೆ ಹಲವು ಹತ್ತು ಕ್ಷೇತ್ರ ಗಳಲ್ಲಿ ಇದು ಕಾರ್ಯೋನ್ಮುಖವಾಗಿದೆ. ಇದರ ತತ್ಪಲವಾಗಿ ಎರಡೂವರೆ ದಶಕಗಳ ಕಾಲದಿಂದಲೂ ಸಾವಿರಾರು ಮಂದಿ ಫಲಾನುಭವಿಗಳು ಈ ಸಂಸ್ಥೆಯ ಸನ್ಮಾರ್ಗದ ಪ್ರಯೋಜನ ಪಡೆದಿದ್ದಾರೆ.
ಯಾವುದೇ ಒಂದು ಸಂಘ ಸಂಸ್ಥೆಯನ್ನು ಕಟ್ಟುವುದು ಬಹಳ ಸುಲಭ. ಆದರೆ ಅದನ್ನು ನಿಸ್ವಾರ್ಥವಾಗಿ ಬೆಳೆಸಿ ಸಮಾಜಕ್ಕೆ ಕೊಡುಗೆಯಾಗಿ ಕೊಡುವುದು ಅಷ್ಟು ಸುಲಭವಲ್ಲವೆಂದ ಬನ್ನೂರು ರಾಜು ಅವರು, ಇಂತಹ ಸಾಧನೆಯನ್ನು ಒಗ್ಗಟ್ಟಿನಿಂದ, ಒಮ್ಮನಸ್ಸಿನಿಂದ, ಸಮಾನ ಮನಸ್ಕ ಭಾವದಿಂದ ಬಹಳ ಸುಲಭವಾಗಿ ಸಾಧ್ಯ ಮಾಡಿರುವ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಸೇವಾ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಇದಕ್ಕೂ ಮುನ್ನ ಸುವಿಖ್ಯಾತ ರಂಗಕರ್ಮಿ ಹಾಗೂ ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಅವರು ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ನಾವು ಸಾಮಾಜಿಕ ಜವಾಬ್ದಾರಿ ಮರೆತು ಬಹುದೊಡ್ಡ ಬಿಕ್ಕಟ್ಟಿಗೆ ಸಿಲುಕಿದ್ದೇವೆ. ಒಳಿತೆನ್ನುವುದು ಯಾರಿಗೂ ಬೇಕಾಗಿಲ್ಲ. ರಂಜನೇನೂ ಬೇಕಾಗಿಲ್ಲ. ಚಿಂತ ನೇನೂ ಬೇಕಾಗಿಲ್ಲ. ನತದೃಷ್ಟ ಸಮಾಜ ನಮ್ಮದು. ಇದು ಪ್ರಜ್ಞೆ ಕಳೆದುಕೊಂಡಿದೆಯೆಂದು ವಿಷಾದ ವ್ಯಕ್ತಪಡಿಸಿದ ಅವರು, ಹಾಗಂತ ಸುಮ್ಮನಿರಲಾಗಲ್ಲ. ನಂಬಿಕೆ ಕಳೆದುಕೊಳ್ಳಲಾಗಲ್ಲ. ನಮ್ಮ ಗುರಿಗಳಲ್ಲಿ , ನಮ್ಮ ದನಿಗಳಲ್ಲಿ ನಂಬಿಕೆಯಿದ್ದು ಸಂಗೀತ ಪರಿಕರಗಳಲ್ಲಿನ ಸಮ್ಮೋಹನ ಶಕ್ತಿಯಂತೆ ಸಮ್ಮೋಹನಗೊಂಡು ಪುನಚ್ಚೇತನಗೊಳ್ಳಬೇಕಾಗಿದೆ. ಇದಕ್ಕಾಗಿ ತುಕ್ಕು ಹಿಡಿದಿರುವ ನಮ್ಮ ದುಡಿ, ಗಾಯನ, ತಮಟೆ ಗಳಿಗೆ ಸಾಣೆ ಹಿಡಿಯಬೇಕಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ
ಅಧ್ಯಕ್ಷ ಸೋಸಲೆ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ನಡೆದುಬಂದ 25 ವರ್ಷಗಳ ಸುದೀರ್ಘ ಹೆಜ್ಜೆ ಗುರುತುಗಳನ್ನು ವಿವರಿಸಿದರು. ಈ ವೇಳೆ ಸೋಸಲೆ ಸಿದ್ದರಾಜು ಸಂಪಾದಕತ್ವದಲ್ಲಿ ಹೊರತಂದಿರುವ ‘ಬೆಳ್ಳಿ ಮಹೋತ್ಸವ’ ಕೃತಿಯನ್ನು ವೇದಿಕೆಯಲ್ಲಿ ಗಣ್ಯರು ಬಿಡುಗಡೆ ಮಾಡಿದರು. ಸುಪ್ರಸಿದ್ಧ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪೆÇ್ರ. ಸಿ. ರಾಮಸ್ವಾಮಿ, ಇತಿಹಾಸತಜ್ಞ ಪೆÇ್ರ.ಪಿ.ವಿ.ನಂಜರಾಜಅರಸ್, ಅರಮನೆ ಮಂಡಳಿಯ ಸಹಾಯಕ ನಿರ್ದೇಶಕ ಟಿ. ಎಸ್. ಸುಬ್ರಹ್ಮಣ್ಯ , ಪ್ರಜ್ಞಾ ಶೈಕ್ಷಣಿಕ ಟ್ರಸ್ಟ್ ನ ಖಜಾಂಚಿ ಹಾಗೂ ಉಪನ್ಯಾಸಕ ಡಾ.ತಿರುಮಲೇಶ್, ಪೆÇ್ರ. ಪಿ. ಮಾದೇಶ್, ಶಿವರಾಜ್, ಸಂಗೀತ ಶಿಕ್ಷಕ ನವೀನ್, ಮಹಾದೇವ್, ಗಾಯಕ ನಾರಾಯಣಸ್ವಾಮಿ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ತಂಡದವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ಹಾಗೆಯೇ ಕಾರ್ಯಕ್ರಮದ ಕೊನೆಯಲ್ಲಿ ನಾಲ್ವಡಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸಂತ ಶಿಶುನಾಳ ಶರೀಫರನ್ನು ಕುರಿತ ಶರೀಫ ನಾಟಕ ಪ್ರದರ್ಶನ ನಡೆಯಿತು.ಕಾರ್ಯಕ್ರಮದಲ್ಲಿ ತಿರುಮಲೇಶ್ ಸ್ವಾಗತಿಸಿದರೆ, ಕುಮಾರಸ್ವಾಮಿ ವಂದಿಸಿದರು.