ಪ್ರಾಸಿಕ್ಯೂಷನ್ ತನಿಖೆ ಹಿನ್ನೆಲೆ ನಾಳೆ ರಾಜಭವನ ಚಲೋ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.26: ಮೂಡಾ ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ತಪ್ಪು ಮಾಡದ ರಾಜ್ಯದ ನಿಷ್ಠಾವಂತ ರಾಜಕಾರಣಿಗಳಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಬಿಜೆಪಿ-ಜೆಡಿಎಸ್ ಪಕ್ಷಗಳ ಕೈಗೊಂಬೆಯಾಗಿರುವ ರಾಜ್ಯಪಾಲ ಥಾವರ್‍ಚಂದ್ ಗೆಹಲೋಟ್ ಅವರ ನಡೆಯನ್ನು ಧಿಕ್ಕರಿಸಿ 27-08-2024 ನೇ ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ರಾಜ್ಯದ ಶೋಷಿತಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಹಸ್ರಾರು ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಬಂಧುಗಳು ರಾಜಭವನ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕೆ.ಆರ್.ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮನವಿ ಮಾಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶೋಷಿತ ಸಮುದಾಯಗಳ ನಾಯಕರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕಳೆದ 40 ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದಂತೆ ದಕ್ಷ, ಪ್ರಾಮಾಣಿಕ ಆಡಳಿತ ನೀಡಿ ದೇಶದಾಧ್ಯಂತ ಪ್ರಖ್ಯಾತರಾಗಿರುವ ಸಿದ್ಧರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಸಂಚು ನಡೆಸಿರುವ ಬಿಜೆಪಿ-ಜೆಡಿಎಸ್ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಮೂಡಾ ನಿವೇಶನಗಳ ಹಗರಣದಲ್ಲಿ ಯಾವುದೇ ತಪ್ಪು ಮಾಡದ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಒಪ್ಪಿಗೆ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ತತ್ವ ಸಿದ್ಧಾಂತಗಳ ಬಗ್ಗೆ ರಾಜ್ಯಪಾಲರಿಗೆ ಕಿಂಚಿತ್ತು ಗೌರವವಿದ್ದರೆ ಕೂಡಲೇ ಪ್ರಾಸಿಕ್ಯೂಷನ್ ತನಿಖೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾಧ್ಯಂತ ಶೋಷಿತ ಸಮುದಾಯಗಳ ಬೃಹತ್ ಪ್ರತಿಭಟನೆ ನಡೆಸಿ ಗೋಬ್ಯಾಕ್ ಗವರ?ನರ್ ಎಂಬ ಗೋಷಣೆಯೊಂದಿಗೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ನಾಗೇಂದ್ರಕುಮಾರ್ ಎಚ್ಚರಿಕೆ ನೀಡಿದರು.
ರಾಜ್ಯ ವಿಧಾನಸಭೆಯ ಕಾಂಗ್ರೆಸ್ ಶಾಸಕರು ಹಾಗೂ ದೇಶದ ಇಂಡಿಯಾ ಒಕ್ಕೂಟದ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಯಾವುದೇ ತಪ್ಪನ್ನು ಮಾಡದ ಸಿದ್ಧರಾಮಯ್ಯ ಅವರು ಆರೋಪಗಳಿಂದ ಎದೆಗುಂದದೇ ತಮ್ಮ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಇಡೀ ದೇಶವೇ ಮೆಚ್ಚುವಂತಹ ದಕ್ಷ ಆಡಳಿತ ನೀಡುತ್ತಿರುವ ಸಿದ್ಧರಾಮಯ್ಯ ಅವರು ಶೋಷಿತ ಸಮುದಾಯಗಳ ಧೀಶಕ್ತಿಯಾಗಿದ್ದು ನೊಂದವರು ಹಾಗೂ ತುಳಿತಕ್ಕೊಳಗಾದ ಜನರ ಪಾಲಿನ ಆಶಾಕಿರಣವಾಗಿದ್ದು ಬಾಳಿಗೆ ಬೆಳಕಾಗಿದ್ದಾರೆ. ನುಡಿದಂತೆ ನಡೆಯುವ ಎದೆಗಾರಿಕೆ ಹೊಂದಿರುವ ಸಿದ್ಧರಾಮಯ್ಯ ರಾಜ್ಯ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಿದ್ದಾರೆ ಎಂದು ಅಭಿಮಾನದಿಂದ ಹೇಳಿದ ನಾಗೇಂದ್ರಕುಮಾರ್ ಪ್ರಾಸಿಕ್ಯೂಷನ್ ತನಿಖೆಯನ್ನು ರಾಜ್ಯಪಾಲರು ವಾಪಸ್ ಪಡೆಯಬೇಕು ಇಲ್ಲವೇ ರಾಜ್ಯದಿಂದ ಮಾರ್ಯಾದೆಯಿಂದ ಜಾಗ ಖಾಲಿ ಮಾಡಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ರಾಜಯ್ಯ, ಹೊಸಹೊಳಲು ಶಿವಣ್ಣ, ಪುರಸಭೆಯ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್, ಮಾಜಿಸದಸ್ಯ ನವೀದ್‍ಅಹಮದ್, ಮುಸ್ಲಿಂ ಸಮಾಜದ ಮುಖಂಡ ಫಯಾಜ್, ಅಯಾಜ್ ಅಹಮದ್, ಮಡುವಿನಕೋಡಿ ಕಾಂತರಾಜು,ಅಗ್ರಹಾರಬಾಚಹಳ್ಳಿ ಕುಮಾರ್, ಹೊಸಹೊಳಲು ಪುಟ್ಟರಾಜು ಸೇರಿದಂತೆ 25ಕ್ಕೂ ಹೆಚ್ಚು ಶೋಷಿತ ಸಮುದಾಯಗಳ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.