ಕಬನಿ ವಿತರಣೆ ನಾಲೆಗಳ ದುರಸ್ತಿ ಹಾಗೂ ಕೆರೆಗಳ ಹೂಳು ತೆಗೆಯಲು ಕ್ರಿಯಾ ಸಮಿತಿ ಸಲ್ಲಿಸುವಂತೆ ಶಾಸಕ ಕೃಷ್ಣಮೂರ್ತಿ ಸೂಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.25-ಕೊಳ್ಳೇಗಾಲ ಕ್ಷೇತ್ರದ ವ್ಯಾಪ್ತಿಯ ಕೊಳ್ಳೇಗಾಲ, ಯಳಂದೂರು ಹಾಗೂ ಸಂತೇಮರಹಳ್ಳಿ ಉಪ ವಿಭಾಗಗಳ ಕಬಿನಿ ನಾಲೆಗಳ ದುರಸ್ತಿ ಈ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಹೂಳು ತೆಗೆಸಿ, ಸಂಪೂರ್ಣವಾಗಿ ಕೆರೆಗಳಿಗೆ ತುಂಭಿ, ನಾಲೆಗಳಲ್ಲಿ ನೀರು ಹರಿದು ಕಟ್ಟ ಕಡೆಯ ಜಮೀನಿಗೂ ಸಹ ನೀರು ತಲುಪುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳು ವಿಸ್ಕøತವಾದ ಕ್ರಿಯಾ ಯೋಜನೆಯನ್ನು (ಡಿಪಿಆರ್) ಸಲ್ಲಿಸಿದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ, ಅಭಿವೃದ್ದಿ ಪಡಿಸಲು ಬದ್ದನಾಗಿರುವುದಾಗಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಜಿಲ್ಲೆಯ ಕೊಳ್ಳೇಗಾಲ, ಸಂತೇಮರಹಳ್ಳಿ ಹಾಗು ಯಳಂದೂರು ಉಪ ವಿಭಾಗದ ಅಧಿಕಾರಿಗಳು ಮತ್ತು ಅಧೀಕ್ಷಕ ಇಂಜಿನಿಯರ್ ಮಹೇಶ್ ಅವರನ್ನು ಒಳಗೊಂಡ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿ, ಈ ವ್ಯಾಪ್ತಿಯ ನಾಲೆಗಳ ಸ್ಥಿತಿಗತಿ ಹಾಗು ಕೆರೆಗಳಲ್ಲಿ ನೀರಿನ ಶೇಖರÀಣೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ವಿತರಣೆ ನಾಲೆಗಳು ಹಾಗೂ ಕೆರೆಗಳು ನಮ್ಮ ಭಾಗದಲ್ಲಿವೆ. ಈ ಕೆರೆಗಳನ್ನು ನಿರ್ಮಾಣ ಹಾಗೂ ವಿತರಣೆ ನಾಲೆಗಳನ್ನು ನಿರ್ಮಾಣ ಮಾಡಿದ್ದು ಬಿಟ್ಟರೆ ಇದುವರೆಗೆ ಇವುಗಳನ್ನು ದುರಸ್ತಿ ಪಡಿಸುವ ಹಾಗೂ ಹೂಳು ತೆಗೆಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ಇದರಿಂದಾಗಿ ಕೆರೆ ಅಂಗಳಲ್ಲಿ ಗಿಡ ಗಂಟೆಗಳು ಬೆಳದು ಹೂಳು ತುಂಭಿಕೊಂಡು ನೀರು ಶೇಖರಣೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ. ಶೇ.30 ರಷ್ಟು ನೀರು ಶೇಖರಣೆಯಾಗುತ್ತಿಲ್ಲ. ಜೊತೆಗೆ ಕಭಿನಿಯಿಂದ ವಿತರಣೆ ನಾಲೆಗಳ ಮೂಲಕ ನೀರು ಬಿಟ್ಟರು ಸಹ ನಾಲೆಗಳ ಸಂಪರ್ಕ ಕಡಿದುಕೊಂಡು ಸರಿಯಾಗಿ ನೀರು ಹರಿಯುತ್ತಿಲ್ಲ. ಕಾರಣ ಈ ನಾಲೆಗಳು ಕಾಲ ಕಾಲಕ್ಕೆ ದುರಸ್ತಿಯಾಗುತ್ತಿಲ್ಲ. ಜಂಗಲ್ ಬೆಳೆದುಕೊಂಡು ನಾಲೆಗಳೇ ಕಾಣದಂತಹ ಪರಿಸ್ಥಿತಿ ಇದೆ. ಈ ನಾಲೆಗಳಿಗೆ ನೀರು ಬಿಟ್ಟರು ಸಹ ಕೊನೆಯ ಜಮೀನ ರೈತರಿಗೆ ನೀರು ಹರಿದು ಹೋಗುವುದಿಲ್ಲ. ಹೀಗಾಗಿ ಇದನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಆಯಾಯ ಉಪ ವಿಭಾಗ ಇಂಜಿನಿಯರ್‍ಗಳು ಕ್ರಿಯಾ ಯೋಜನೆಯನ್ನು ತಯಾರು ಮಾಡಿ, ಅಧೀಕ್ಷಕ ಇಂಜಿನಿಯರ್ ಅವರಿಗೆ ನೀಡಿದರೆ, ಅವರು ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಬಳಿಕ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು, ಕಾಡಾ ಅಧ್ಯಕ್ಷರಿಗೆ ಒತ್ತಡ ಹಾಕಿ ಅನುದಾನವನ್ನು ಬಿಡುಗಡೆ ಮಾಡಿಸಿ, ಅಭಿವೃದ್ದಿ ಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳೋಣ ಎಂದರು.
ಅಧೀಕ್ಷಕ ಇಂಜಿನಿಯರ್ ಮಹೇಶ್ ಮಾತನಾಡಿ, ಸುವರ್ಣವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಣ್ಣೇಗಾಲ ಪಿಕ್‍ಆಪ್ ಮತ್ತು ಗಣಗನೂರು ಪಿಕ್‍ಆಪ್‍ಗಳನ್ನು ಉನ್ನತೀಕರಿಸಿ, ಅಭಿವೃದ್ದಿ ಪಡಿಸಿದರೆ, ನೀರು ಪೋಲಾಗುವುದು ತಪ್ಪುತ್ತದೆ. ಹೆಚ್ಚುವರಿ ನೀರನ್ನು ಕೆರೆಗಳಿಗೆ ತಲುಪುವಂತೆ ಕಾಲುವೆಗಳನ್ನು ದುರಸ್ತಿಗೊಳಿಸುವುದರ ಮೂಲಕ ನೀರು ಸರಾಗವಾಗಿ ಕೆರೆಗಳಿಗೆ ತುಲಪುÀವಂತೆ ಮಾಡಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೊಂಗನೂರು ಚಂದ್ರು, ಮುಖಂಡರಾದ ತೋಟೇಶ್, ರಾಘವೇಂದ್ರ, ಹೊಂಗನೂರು ಚೇತನ್, ಹಾಗೂ ಉಪ ವಿಭಾಗಗಳ ಇಂಜಿನಿಯರ್‍ಗಳು ಭಾಗವಹಿಸಿದ್ದರು.