ಕನ್ನಡವನ್ನು ಪ್ರೀತಿಸಿ ಬೆಳೆಸಬೇಕು: ಭಾರತಿ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ:೨೬:ಕನ್ನಡಿಗರು ಕನ್ನಡ ಭಾಷೆಯನ್ನು ಅತ್ಯಂತ ಪ್ರೀತಿಯಿಂದ ಬೆಳೆಸಬೇಕು, ಕನ್ನಡ ನುಡಿ ಅತ್ಯಂತ ಪ್ರಾಚೀನವಾದುದು. ಜಾತಿ, ಮತ ಮತ್ತು ಬೇಧಗಳನ್ನು ಮರೆತು ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ನಾವೆಲ್ಲರೂ ಕಂಕಣಬದ್ದರಾಗೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಸಾಪ ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕಗಳ ಸಹಯೋಗದಲ್ಲಿ ದಿವಂಗತ ದ.ಪಿ. ಕೊಟ್ನಾಳ ಹಾಗೂ ದಿವಂಗತ ಆಶಾ ಕೊಟ್ನಾಳ ಶಿಕ್ಷಕ ದಂಪತಿಗಳ ದತ್ತಿ. ದತ್ತಿದಾನಿಗಳು ಡಾ. ಜಿ.ಡಿ ಕೊಟ್ನಾಳ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ದಿವಂಗತ ವಾಯ್ ಎಸ್ ವಿಜಯಲಕ್ಷ್ಮಿ ಸೂರ್ಯನಾರಾಯಣ ದತ್ತಿ. ದತ್ತಿ ದಾನಿಗಳು ವಾಯ್.ಎಸ್ ವಿ ದತ್ತ, ಮಾಜಿ ಶಾಸಕರು, ಕಡೂರು ಇವರ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ದತ್ತಿ ಉಪನ್ಯಾಸಗಳು ಸದಾ ಸಮಾಜ ಪರಿವರ್ತನೆಗೆ ಕಾರಣವಾಗಿವೆ ಎಂದರು.
ಬುದ್ಧ, ಬಸವ ಅಂಬೇಡ್ಕರ್ ಹಾಗೂ ಅನೇಕ ದಾರ್ಶನಿಕರು ಈ ದೇಶವನ್ನು ಕಟ್ಟಿದವರು. ಅವರೆಲ್ಲರ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಪ್ರೊ. ಕೆ.ಎಸ್. ಪಾಟೀಲ ಅವರು ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಅನೇಕ ಹಿರಿಯ ಸಾಹಿತಿಗಳಿದ್ದು, ಅವರೆಲ್ಲ ಈ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಡಾ ಫ.ಗು. ಹಳಕಟ್ಟಿ, ಸಿಂಪಿ ಲಿಂಗಣ್ಣ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಮೂಲಕ ನಮ್ಮ ನೆಲದ ಕೀರ್ತಿ ಬೆಳಗಿಸಿದ್ದಾರೆ. ಇಂದೂ ಸಹ ಸಾಹಿತ್ಯ ಪರಿಷತ್ತು ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು. “
ಕೋಮು ಸೌಹಾರ್ದತೆ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತÀ ಡಾ. ಜಿ.ಡಿ ಕೊಟ್ನಾಳ, ಬ್ರಿಟಿಷರ ಕಾಲದಲ್ಲಿ ಆದರ್ಶ ಶಿಕ್ಷಕರಾಗಿದ್ದ ದಿ. ದ.ಪಿ ಕೊಟ್ನಾಳ ಹಾಗೂ ಆಶಾ ಕೊಟ್ನಾಳ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಶಿಕ್ಷಕರನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಭಾವೈಕ್ಯತೆಯಿಂದ ಬದುಕನ್ನು ಸಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಲುಷಿತ ವಾತಾವರಣಕ್ಕೆ ಎಂದಿಗೂ ಅವಕಾಶ ನೀಡಬಾರದು ಎಂದರು.
“ಜಾನಪದ ಕಲೆ ಹಾಗೂ ಸಂಸ್ಕ್ರತಿ” ಕುರಿತು ಉಪನ್ಯಾಸ ನೀಡಿದ ಹೊನ್ನುಟಗಿಯ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಬಸವರಾಜ ಕುಂಬಾರ ಅವರು ಮಾತನಾಡಿ, ಜನಪದ ಸಾಹಿತ್ಯ ನಮ್ಮೆಲ್ಲರ ತಾಯಿ ಬೇರು. ಜನಪದ ಕಲೆ ಹಾಗೂ ಸಂಸ್ಕ್ರತಿಯ ಮೂಲಕ ಜನಪದ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರ ಬಳಗ ಅದರಲ್ಲೂ ವಿಶೇಷವಾಗಿ ಮಧುರಚೆನ್ನರ ಕೊಡುಗೆಯನ್ನು ಸ್ಮರಿಸಿದರು. ಲಾವಣಿ,ಹಂತಿ, ಸೋಬಾನ ಪದಗಳ ಮೂಲಕ ಅನೇಕ ಕುಟ್ಟುವ, ಬೀಸುವ ಹಾಡುಗಳ ಮೂಲಕ ಜನಪದರು ಪ್ರಕೃತಿಯನ್ನೇ ದೇವರೆಂದು ಆರಾಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಆಶಾ ಬಿರಾದಾರ, ಇಮಾಮ ಹಳ್ಳೂರ, ಡಾ. ರಾಜಕುಮಾರ ಜೊಲ್ಲೆ, ರಜಿಯಾಬೇಗಂ ಕೊಟ್ನಾಳ ವೇದಿಕೆ ಮೇಲಿದ್ದರು.
ಮಮತಾ ಮುಳಸಾವಳಗಿ ಸ್ವಾಗತಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಡಾ. ಮಾಧವ ಗುಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಪದಾಧಿಕಾರಿಗಳಾದ ಡಾ. ಸಂಗಮೇಶ ಮೇತ್ರಿ, ರವಿ ಕಿತ್ತೂರ, ಕಮಲಾ ಮುರಾಳ, ರಾಜೇಸಾಬ ಶಿವನಗುತ್ತಿ, ಅಹ್ಮದ ವಾಲೀಕಾರ, ಎಸ್.ಎಲ್. ಇಂಗಳೇಶ್ವರ, ಅರ್ಜುನ ಶಿರೂರ, ಜಿ.ಎಸ್ ಬಳ್ಳೂರ, ಶ್ರೀಕಾಂತ ನಾಡಗೌಡ, ಬಿ.ಎಂ. ಆಜೂರ, ಕೆ.ಎಸ್ ಹಣಮಾಣಿ, ಶೋಭಾ ಹರಿಜನ, ಶಾಂತಾ ವಿಭೂತಿ, ಶೇಷರಾವ ಮಾನೆ, ಎಂ.ಎA. ಖಲಾಸಿ, ಗಂಗಮ್ಮ ರೆಡ್ಡಿ, ಬಸವರಾಜ ಕೋನರೆಡ್ಡಿ, ಮಹಾದೇವ ತೆಲಗಿ, ಎಂ.ಆರ್ ಕೊಟ್ನಾಳ, ಅಮೀನಸಾಬ ಬುರಾಣಗೋಳ, ಮಹ್ಮದ ಅವಟಿ, ಶಬ್ಬೀರ್ ಅಹ್ಮದ ಕೊಟ್ನಾಳ, ಬಿ.ಎಸ್.ಮಠ, ಅರವಿಂದ ಕುಲಕರ್ಣಿ, ಡಿ.ಬಿ.ಹೆಬ್ಬಾಳ, ಆರ್.ಎಮ್ ದೊಡಮನಿ, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೆಹತಾಬ್ ಕಾಗವಾಡ ತತ್ವಗೀತೆ ಹಾಡಿ ರಂಜಿಸಿದರು.