ಹಿರಿಯ ನಾಗರೀಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಆ.೨೬; ವಯೋವೃದ್ಧರ ಆರೈಕೆಯಲ್ಲಿ, ಆಯುರ್ವೇದ ಚಿಕಿತ್ಸಾಪದ್ಧತಿ ಎಲ್ಲಾ ದೃಷ್ಟಿಕೋನದಿಂದಲೂ ಪೂರಕವಾದದ್ಧಾಗಿದೆ, ಏಕೆಂದರೆ ಇದು ದೈಹಿಕ ಕಾಯಿಲೆಗಳನ್ನು ಮಾತ್ರವಲ್ಲದೆ ಹಿರಿಯರ ಭಾವನಾತ್ಮಕ, ಮಾನಸಿಕ ಹಾಗೂ ಆಧ್ಯಾತ್ಮಿಕ ರೀತಿಯಲ್ಲೂ ರೋಗಿಯನ್ನು ಗುಣಪಡಿಸಬಲ್ಲದು ಎಂದು ಹುಲಿಕುಂಟೆ ಸರ್ಕಾರಿ ಆಯುಷ್ ಚಿಕಿತ್ಸಾ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಆರ್. ರಘುವೀರ್ ಅಭಿಪ್ರಾಯ ಪಟ್ಟಿದ್ದಾರೆ.ತಾಲ್ಲೂಕಿನ ಸರ್ಕಾರಿ ಆಯುರ್ವೇದ ಆಯುಷ್ ಆರೋಗ್ಯ ಮತ್ತು ಕ್ಷೇಮ ಮಂದಿರ ಜೆ.ಎನ್. ಕೋಟೆ ವತಿಯಿಂದ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಸಹಯೋಗದೊಂದಿಗೆ ಜೆ.ಎನ್.ಕೋಟೆ ವ್ಯಾಪ್ತಿಯ ಗೊಲ್ಲನಕಟ್ಟೆ ಗ್ರಾಮದಲ್ಲಿ ಹಿರಿಯ ನಾಗರೀಕರಿಗಾಗಿ ಇಂದು ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾನ್ಯವಾಗಿ ರೋಗಲಕ್ಷಣಗಳ ನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ಸಾಂಪ್ರದಾಯಿಕ ಔಷಧ ಪದ್ಧತಿಗಿಂತ ಭಿನ್ನವಾಗಿ, ಆಯುರ್ವೇದವು ಅನಾರೋಗ್ಯದ ಮೂಲ ಕಾರಣವನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಕಾರಿಯಾಗಿದೆ, ದೀರ್ಘಕಾಲೀನ ರೋಗಗಳನ್ನು ಗುಣಪಡಿಸುವುದರ ಜೊತೆಗೆ ಆರೋಗ್ಯವನ್ನು ಸಹಜ ಸ್ಥಿತಿಯಲ್ಲಿರಿಸಬಹುದಾಗಿದೆ ಎಂದು ಹೇಳಿದರು.ಇದೇ ಸಂಧರ್ಭದಲ್ಲಿ ಶಿಬಿರಕ್ಕೆ ಆಗಮಿಸಿದ ರೋಗಿಗಳಿಗೆ ಚಿಕಿತ್ಸೆ ನೀಡಿ ಮಾತನಾಡಿದ ಐಮಂಗಳ ಆಯುಷ್ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಯು.ಎಂ. ಮಾತನಾಡಿ ಆಯುಷ್ ಜ್ಞಾನ ಮತ್ತು ಚಿಕಿತ್ಸಕ ವಿಧಾನಗಳ ಕಾಲಾತೀತ ನಿಧಿಯನ್ನು ನೀಡುತ್ತದೆ, ಅದು ವೃದ್ಧಾಪ್ಯದ ಆರೈಕೆಗಾಗಿ ಅಪಾರ ಭರವಸೆಯನ್ನು ಹೊಂದಿದೆ. ಈ ಪುರಾತನ ಬುದ್ಧಿವಂತಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಅದನ್ನು ಮುಖ್ಯವಾಹಿನಿಯ ಆರೋಗ್ಯ ರಕ್ಷಣೆಯನ್ನು ಸಂಯೋಜಿಸುವ ಮೂಲಕ, ನಾವು ವಯಸ್ಸಾದವರನ್ನು ಶೀಘ್ರವಾಗಿ ಗುಣಪಡಿಸು ವಿಧಾನವನ್ನು ಅಭಿವೃದ್ಧಿಗೊಳಸಬೇಕು ಮತ್ತು ನಮ್ಮ ಹಿರಿಯರು ತಮ್ಮ ಇಳೀ ವಯಸ್ಸಿನಲ್ಲಿ ಆರೋಗ್ಯ ಮತ್ತು ಕ್ಷೇಮದಿಂದ ಕಾಲಕಳೆಯುವಂತೆ ಮಾಡಲು ಪ್ರಯತ್ನಿಸಬೇಕಾಗಿದೆ ಅದಕ್ಕಾಗಿ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯು ಸತತ ಪ್ರಯತ್ನದಲ್ಲಿ ‌ತೊಡಗಿದೆ. ಎಂದು ತಿಳಿಸಿದರು.ಶಿಬಿರದ ಆಯೋಜಕರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಜೆ ಎನ್ ಕೋಟೆ ಆಯುಷ್ ಚಿಕಿತ್ಸಾ ‌ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶ್ರೀಮತಿ ಡಾ. ವಿಜಯಲಕ್ಷ್ಮಿ ಪಿ. ಮಾತನಾಡಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ನಿಧಾನವಾದರೂ ಗುಣವಾಗುತ್ತದೆ.ಜನರು ಇನ್ನೂ ಆಯುರ್ವೇದ ಚಿಕಿತ್ಸಾ ಪದ್ಧತಿ ಸಂಪೂರ್ಣವಾಗಿ ನಂಬಿಲ್ಲ. ನಂಬಿಕೆ ಇರುವವರು ಈ ಪದ್ಧತಿ ಬಿಡುವುದಿಲ್ಲ ಹಿರಿಯ ನಾಗರೀಕರಿಗೆ ಅತೀಯಾಗಿ ಕಾಡುವುದು ಸಂಧಿವಾತ ಸಮಸ್ಯೆ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ವಯಸ್ಸಾದಂತೆ, ಅವರು ಆಗಾಗ್ಗೆ ಮೊಣಕಾಲು ಕೀಲು ಸಂಧಿ ನೋವುಗಳನ್ನು ಅನುಭವಿಸುತ್ತಾರೆ, ಆಯುರ್ವೇದ ಚಿಕಿತ್ಸೆಯು ಮೊಣಕಾಲು ನೋವಿಗೆ ವ್ಯವಸ್ಥಿತ ಚಿಕಿತ್ಸಕ ವಿಧಾನವನ್ನು ನೀಡುತ್ತದೆ ಎಂದು ತಿಳಿಸಿದರು.ಆರೋಗ್ಯ ಶಿಬಿರದಲ್ಲಿ ಗ್ರಾಮದ ‌ಸುಮಾರು 85ಕ್ಕೂ ಹೆಚ್ಚು ಹಿರಿಯ ನಾಗರೀಗಕರು ಭಾಗವಹಿಸಿ ಚಿಕಿತ್ಸೆ ಪಡೆದರು. ಇದೇ ಸಂಧರ್ಭದಲ್ಲಿ ಇತ್ತೀಚೆಗೆ ಅತಿಯಾಗಿ ಕಾಡುತ್ತಿರುವ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಿ ಹಂಚಲಾಯಿತು.ಕಾರ್ಯಕ್ರಮದಲ್ಲಿ ಅರೋಗ್ಯ ಸಿಬ್ಬಂದಿ ಶಾರದಮ್ಮ, ಸಮುದಾಯ ಆರೋಗ್ಯಾಧಿಕಾರಿ ರಮೇಶ್, ಆರೋಗ್ಯ ಸುರಕ್ಷಣಾಧಿಕಾರಿ ರತ್ನಮ್ಮ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
