ಕಲಿಯುಗದಲ್ಲಿ ಶಕ್ತಿ ಎಂದರೆ ಸಂಘಟನೆ; ಜೆ.ಸಿ ಮಾಧುಸ್ವಾಮಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೬: ದಾವಣಗೆರೆ ಜಿಲ್ಲೆಯಲ್ಲಿ ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಪ್ರತಿಯೊಬ್ಬರನ್ನ ಸಮಾಜದ ಮುಖ್ಯವಾಹಿನಿಗೆ ಕರೆ ತರುವಂತಹ ಕೆಲಸವಾಗಬೇಕು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೊಳಂಬ ವೀರಶೈವ ಲಿಂಗಾಯತ ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಇದ್ದಂತಹವರು ಶಕ್ತಿ ಇಲ್ಲದಂತಹವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದರು.ದಾವಣಗೆರೆ ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಂಘವನ್ನ ಬಹಳ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಸಂಘ ಯಾರ ವಿರುದ್ಧವಾಗಿ, ಪರ್ಯಾಯ ವಾಗಿ ಅಸ್ತಿತ್ವಕ್ಕೆ ತರುತ್ತಿಲ್ಲ. ಎಲ್ಲ ಸಮಾಜದವರೊಂದಿಗೆ ಬೆಸೆದುಕೊಂಡು ಸಾಗುವುದು ಶರಣ ಧರ್ಮ. ಎಲ್ಲ ಸಮಾಜದವರೊಂದಿಗೆ ಒಂದಾಗಿ ಮುಂದೆ ಸಾಗಬೇಕು. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವುದೇ ನಿಜವಾದ ಸಂಘಟನೆ ಎಂದು ತಿಳಿಸಿದರು. ಕಲಿಯುಗದಲ್ಲಿ ಶಕ್ತಿ ಎಂದರೆ ಸಂಘಟನೆ. ಎಲ್ಲರೂ ಒಗ್ಗಟ್ಟಾಗಿ ಶಕ್ತಿಯುತವಾಗಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ಒಬ್ಬರೇ ಎಷ್ಟೇ ಸಮರ್ಥರಾಗಿದ್ದರೂ ಎಲ್ಲಿಯೋ ಒಂದು ಕಡೆಯಿಂದ ಸಾಮರ್ಥ್ಯ ಕಣ್ಮರೆಯಾಗುತ್ತದೆ. ಹಾಗಾಗಿ ಕಾಲ, ವಿಜ್ಞಾನ, ತಂತ್ರಜ್ಞಾನ, ಬೇಡಿಕೆಗೆ ತಕ್ಕಂತೆ ಒಗ್ಗಟ್ಟಾಗಿ ಸಾಗಬೇಕು. ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಂಘಟನೆಯೂ ಅದೇ ತೆರನಾಗಿ ಮುಂದುವರಿಯಬೇಕು ಎಂದು ಆಶಿಸಿದರು.ಯಾವುದೇ ಸಮಾಜದ ನಾಯಕರೇ ಆಗಿರಲಿ ನನ್ನದು ಎಂಬ ಭಾವನೆಯಿಂದ ಮುನ್ನಡೆಯಬೇಕು. ಅದನ್ನು ಬಿಟ್ಟು ನಾನು ಮತ್ತು ಪ್ರತಿಷ್ಠೆ  ಹೊಂದಿರಬಾರದು. ಈ ಕಾರಣಕ್ಕಾಗಿಯೇ ಯಾವುದೇ ಸಂಘ, ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಮುಂದುವರಿಯದೇ ಇರುವುದು ಕಾಣಬಹುದು. ದೇಶ,ಸಮಾಜದ ಬಗ್ಗೆ ಸಂಬಂಧವೇ ಇಲ್ಲವಂತೆ ವರ್ತಿಸುವುದು, ನಾನು ಎಂಬ ಭಾವನೆಯೂ ಹಿಂದುಳಿವಿಕೆಗೆ ಕಾರಣ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.ಪ್ರತಿಯೊಬ್ಬರು ಸಮಾಜದಲ್ಲಿ ಸ್ವಾಭಿಮಾನದಿಂದ, ಯಾರ ಹಂಗಿನಲ್ಲೂ ಇಲ್ಲದೆ ಶಕ್ತಿಶಾಲಿಯಾಗಿ ಬೆಳೆಯಲು ಶಿಕ್ಷಣ ಅತೀ ಅಗತ್ಯ. ಬರೀ ಉದ್ಯೋಗ ಸಂಪಾದನೆ ದೃಷ್ಟಿಯಿಂದ ಶಿಕ್ಷಣ ಪಡೆಯಬಾರದು. ಅಂಕಗಳಿಗಾಗಿಯೇ ಓದಬಾರದು. ಪ್ರತಿಯೊಂದನ್ನೂ ಅರ್ಥ ಮಾಡಿಕೊಂಡು ಓದಿದಾಗ ಮಾತ್ರ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯ. ಓದಿ ಪರೀಕ್ಷೆ ಬರೆಯುವುದಕ್ಕಿಂತಲೂ ಅರ್ಥ ಮಾಡಿಕೊಂಡು ಬರೆದಲ್ಲಿ ನೀಟ್, ಸಿಇಟಿ… ಎಲ್ಲದರಲ್ಲೂ ಯಶ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪೋಷಕರು ಮಕ್ಕಳ ಶಕ್ತಿ, ಸಾಮರ್ಥ್ಯ ಕುಗ್ಗಿಸುವ ಕೆಲಸ ಮಾಡಬಾರದು. ಅದರಿಂದ ಮಕ್ಕಳನ್ನು ಸಂಪೂರ್ಣ ವಾಗಿ ಪರಾವಲಂಬಿಗಳನ್ನಾಗಿ ಮಾಡಿದಂತಾಗುತ್ತದೆ. ಶಕ್ತಿ, ಸಾಮರ್ಥ್ಯಯನ್ನ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿಕೊಡ ಬೇಕು. ಜೀವನದಲ್ಲಿ ಪರಿಶ್ರಮಕ್ಕೆ ಪರ್ಯಾಯವಾದುದು ಯಾವುದೂ ಇಲ್ಲ. ಪರಿಶ್ರಮ, ಮನೋಸ್ಥೈರ್ಯದ ಜೊತೆಗೆ ಸಾಗಬೇಕು. ಇನ್ನೊಬ್ಬರ ಆನ್ನವನ್ನ ಕಿತ್ತುಕೊಳ್ಳುವ ಕೆಲಸ ಮಾಡಬಾರದು. ನಮ್ಮದ್ದನ್ನು ಕಿತ್ತುಕೊಳ್ಳಲು ಬಂದಾಗ ಸೂಕ್ತ ಮಾರ್ಗದಲ್ಲಿ ಪ್ರತಿಭಟಿಸುವಂತಾಗಬೇಕು. ಶಿಕ್ಷಣ, ಸಂಘಟನೆ, ಹೋರಾಟ ಮೂಲಮಂತ್ರ ಆಗಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕ ಮಾತುಗಳಾಡಿದ ಜಿಲ್ಲಾ ಕಾರ್ಯದರ್ಶಿ ಡಾ. ಈ. ವಿರೂಪಾಕ್ಷಪ್ಪ, ನೊಳಂಬ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಬಹು ದಿನಗಳ ನಂತರ ಸಂಘವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ವಿದ್ಯಾಕೇಂದ್ರ, ವಿದ್ಯಾರ್ಥಿ ನಿಲಯ, ಬಡ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಅನುಕೂಲಕ್ಕಾಗಿ ವಿದ್ಯಾರ್ಥಿವೇತನ ನಿಽ ಸ್ಥಾಪನೆ, ಉಚಿತ ಶಿಕ್ಷಣ, ಸಮುದಾಯ ಭವನ ನಿರ್ಮಾಣ ಇತರೆ ಸಾಮಾಜಿಕ ಕಾರ್ಯಚಟುವಟಿಕೆಗಳ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸುವ ಇತರೆ ಕಾರ್ಯಗಳ ಉದ್ದೇಶದೊಂದಿಗೆ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.ಹಳೇಬೀಡಿನ ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಸ್ವಾಮೀಜಿ ಸಾನಿಧ್ಯ, ಸಂಘದ ಜಿಲ್ಲಾಧ್ಯಕ್ಷ ಡಾ.ಅಶೋಕ್ ವಿ. ಪಾಳೇದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಽಶ ಎಸ್.ಎನ್. ಕೆಂಪೆಗೌಡರ, ಎಂ.ಸಿ. ಭುವನೇಶ್ವರ, ಡಾ. ಬಿ.ಸಿ. ರಾಕೇಶ್, ಜಿ.ಎಂ. ರುದ್ರಗೌಡ, ಟಿ.ಎ. ಕುಸಗಟ್ಟಿ, ಎನ್.ಪಿ. ಮೌನೇಶಪ್ಪ, ಡಾ.ಮಂಜುನಾಥ್ ಪಾಟೀಲ್, ಸತೀಶ್ ಸಣ್ಮಗೌಡ ಹಿಂಡೇರ್,ಡಾ.ಎನ್.ಆರ್. ದಿನೇಶ್ ಕುಮಾರ್ ಇತರರು ಇದ್ದರು. ಶೇ.೯೦ಕ್ಕಿಂತಲೂ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ೪೯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.