ಪರಮಾತ್ಮನಿಂದ ರಕ್ಷಣೆ ಪಡೆಯುವುದೇ ರಕ್ಷಾ ಬಂಧನ ಹಬ್ಬ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೨೬; ಪರಮಾತ್ಮನಿಂದ ರಕ್ಷಣೆ ಪಡೆಯುವುದೇ ರಕ್ಷಾ ಬಂಧನ ಹಬ್ಬ ಎಂದು ದಾವಣಗೆರೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಲೀಲಾಜಿ ಅವರು ಹೇಳಿದರು.ನಗರದ ಶಿವಧ್ಯಾನ ಮಂದಿರದಲ್ಲಿ ದಾವಣಗೆರೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ‌‌ ವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಷ ಜನ್ಮಾಷ್ಟಮಿ, ರಕ್ಷಾ ಬಂಧನ ಹಾಗೂ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ರಕ್ಷಾ ಬಂಧನ ವಿಶೇಷತೆಯನ್ನು ಹೊಂದಿರುವ ಹಬ್ಬವಾಗಿದ್ದು, ಪರಮಾತ್ಮನ ರಕ್ಷಣೆ ಪಡೆಯುವುದೇ ರಕ್ಷಾ ಬಂಧನ ಹಬ್ಬವಾಗಿದೆ. ಪ್ರತಿಯೊಬ್ಬರಿಗೂ ಪರಮಾತ್ಮನ ರಕ್ಷಣೆ ಬೇಕು. ಯೋಧ, ವೈದ್ಯೆ, ರಾಜಕಾರಣಿ ಕೂಡ ಪರಮಾತ್ಮನ ರಕ್ಷಣೆಯನ್ನು ಬಯಸುತ್ತಾನೆ ಎಂದರು.ರಕ್ಷಾ ಬಂಧನ ಭಾರತೀಯರ‌ ಪ್ರತೀತಿಯ ಹಬ್ಬವಾಗಿದ್ದು, ಕಂಕಣ ಕಟ್ಟಿಕೊಂಡು ಕಂಕಣ ಬದ್ಧರಾಗಿರುವುದಾಗಿದೆ. ಸಹೋದರ ಸಹೋದರಿಯರ ಪ್ರೀತಿ, ಆತ್ಮೀಯ ಹಬ್ಬವಾಗಿರುವ ರಕ್ಷಾ ಬಂಧನ ಹಬ್ಬವನ್ನು ನಾವು ಸೀಮಿತ ಮಾಡಿಕೊಂಡಿದ್ದೇವೆ. ಎಲ್ಲರನ್ನೂ ಸಹೋದರತೆಯಿಂದ ನೋಡಿದಾಗ ಅವರೇ ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂದರು.ಬಂಧನವನ್ನು ಯಾರೂ ಕೂಡನ ಇಷ್ಟ ಪಡುವುದಿಲ್ಲ. ರಕ್ಷಾ ಬಂಧನವನ್ನು ಎಲ್ಲರೂ ಪ್ರೀತಿ ಮಾಡುತ್ತಾರೆ. ಸಾಂಸಾರಿಕ ಬಂಧನದಲ್ಲಿ ದುಃಖ ಇದ್ದರೆ, ಆಧ್ಯಾತ್ಮಿಕ ಬಂಧನದಲ್ಲಿ ಪರಮಾತ್ಮನ ಬಂಧನ ಇರುತ್ತದೆ ಎಂದ ಅವರು, ತಪ್ಪು ದಾರಿ ಬಿಟ್ಟು ಸನ್ಮಾರ್ಗದಲ್ಲಿ ನಡೆಯುವುದೇ ಧರ್ಮ‌ ರಕ್ಷಣೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ವರದಿಗಾರರ ಕೂಟ ಗೌರವ ಅಧ್ಯಕ್ಷ ಬಿ‌ಎನ್ ಮಲ್ಲೇಶ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಮಂಜುನಾಥ್ ಏಕಬೋಟೆ, ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಸಂಪನ್ನ ಮುತಾಲಿಕ್ ಸೇರಿದಂತೆ ಇತರರು ಇದ್ದರು.