ಆರ್ಥಿಕ ಭದ್ರತೆಗೆ ಯೋಜನಾಬದ್ಧ ಉಳಿತಾಯ, ಹೂಡಿಕೆ ಅಗತ್ಯ
ಕಲಬುರಗಿ:ಆ.25: ಯಾವುದೇ ಒಬ್ಬ ವ್ಯಕ್ತಿ ಎಷ್ಟು ಆದಾಯ ಗಳಿಸುತ್ತಾನೆಂಬುದು ಮುಖ್ಯವಲ್ಲ. ತಾನು ಗಳಿಸಿದ ಆದಾಯದಲ್ಲಿ ಮಿತವ್ಯಯವಾಗಿ ಅವಶ್ಯಕತೆಯಷ್ಟೆ ವೆಚ್ಚ ಮಾಡಿ, ಎಷ್ಟು ಉಳಿತಾಯ ಮಾಡಿದ್ದಾನೆಂಬುದು ಪ್ರಮುಖವಾಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಅನಾವಶ್ಯಕ ಖರ್ಚು ಮಾಡದೆ, ಸರ್ಕಾರ ಅಥವಾ ಅಧಿಕೃತ ಸಂಸ್ಥೆಯಲ್ಲಿ ಸುರಕ್ಷತೆಯ ಖಾತ್ರಿಯೊಂದಿಗೆ ಹೂಡಿಕೆ, ಉಳಿತಾಯ ಮಾಡಬೇಕು. ಹೀಗೆ ಯೋಜನಾ ಬದ್ಧವಾದ ಹೂಡಿಕೆ, ಉಳಿತಾಯವು ಶಿಸ್ತುಬದ್ಧವಾದ ಜೀವನವನ್ನು ರೂಪಿಸುತ್ತದೆ ಎಂದು ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಹಿರಿಯ ಸಲಹೆಗಾರ ಸಂಗಮೇಶ್ವರ ಸರಡಗಿ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ‘ಜ್ಞಾನ ಶಿಕ್ಷಣ ಸಂಸ್ಥೆ’ಯ ವತಿಯಿಂದ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ‘ಅಂಚೆ ಇಲಾಖೆ ಸಿಬ್ಬಂದಿಗಳಿಗೆ ಬೀಳ್ಕೊಡುಗೆ, ಸ್ವಾಗತ ಸಮಾರಂಭ ಹಾಗೂ ಯೋಜನೆಗಳ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರೇಲ್ವೆ ಸ್ಟೇಷನ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ನಬಿಸಾಬ್ ಮತ್ತು ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡುತ್ತಾ, ಸಣ್ಣ ಉಳಿತಾಯವು ವ್ಯಕ್ತಿಯ ಇಳಿ ವಯಸ್ಸಿನಲ್ಲಿ ತುಂಬಾ ಸಹಕಾರಿಯಾಗುತ್ತದೆ. ಈಗಿನ ಯುವ ಜನತೆ ಅನಾವಶ್ಯಕವಾಗಿ ಖರ್ಚು ಮಾಡಿ, ಮುಂದೆ ತಮ್ಮ ಜೀವನದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ. ಹಣವನ್ನು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ. ಹಣ ವ್ಯಕ್ತಿಗಾಗಿ ಕೆಲಸ ಮಾಡುವಂತೆ ಮಾಡಬೇಕು.
ಸರ್ಕಾರ ಉಳಿತಾಯಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಜನರು ಇವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.
ಆಳಂದಗೆ ವರ್ಗಾವಣೆಗೊಂಡ ಸಹಾಯಕ ಪೋಸ್ಟ್ ಮಾಸ್ಟರ್ ನಾಸಿರಖಾನ ಪಠಾಣ ಮತ್ತು ವರ್ಗವಾಗಿ ಆಗಮಿಸಿರುವ ಸಹಾಯಕ ಪೋಸ್ಟ್ ಮಾಸ್ಟರ್ ಗಣಪತರಾಯ ಐಕೂರ್ ಮತ್ತು ರೇಲ್ವೆ ಸ್ಟೇಷನ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ನಬಿಸಾಬ್ ಅವರಿಗೆ ಸತ್ಕರಿಸಿಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಸಂಜೀವಕುಮಾರ ಶೆಟ್ಟಿ, ಶಿವಯೋಗೆಪ್ಪಾ ಎಸ್.ಬಿರಾದಾರ, ವೀರೇಶ ಬೋಳಶೆಟ್ಟಿ ನರೋಣಾ, ಬಸವರಾಜ ಹೆಳವರ ಯಾಳಗಿ, ಶ್ರೀನಿವಾಸ ಬುಜ್ಜಿ, ಸಿದ್ದರಾಮ ತಳವಾರ, ರಾಮಚಂದ್ರ ಕುಲಕರ್ಣಿ, ಜೈಕಿಶನ ಶರ್ಮಾ, ಆಯುಷ್ ಶ್ರೀವಾಸ್ತವ್, ಮಹಮ್ಮದ್ ನಯೀಮ್, ಅಷ್ಫಕ್, ರಾಮಚಂದ್ರ, ಮಹಾದೇವಯ್ಯ ಮಠಪತಿ, ಸಂಜೀವಕುಮಾರ ಹೇರೂರ್, ತೇಜಸ್ವಿ ಎಸ್.ಸರಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.