ಮೀನುಗಾರರಿಗೆ ರಾಜ್ಯ‌ ಸರ್ಕಾರದಿಂದ ನಾನಾ ಸೌಕರ್ಯ: ಮಂಕಾಳ ಎಸ್. ವೈದ್ಯ
ಸಂಜೆವಾಣಿ ವಾರ್ತೆ
ಹೊಸಪೇಟೆ  ಆಗಸ್ಟ್ 25: -ಬಳ್ಳಾರಿ ವಲಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 24ರಂದು ನಡೆಯಿತು.
ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ವೃತ್ತಿಗೆ 600 ವರ್ಷಗಳ ಇತಿಹಾಸವಿದೆ. ಮೂಲ ವೃತ್ತಿದಾರರು ಮತ್ತು ಹೊಸದಾಗಿ ಮೀನುಗಾರಿಕೆ ಮಾಡಲು ಬರುವವರ ಮಧ್ಯೆ ಉತ್ತಮ ರೀತಿಯ ಸಂಬಂಧ ಇರಬೇಕು. ಮೀನುಗಾರಿಕೆ ಬಗ್ಗೆ ಗೊತ್ತಿಲ್ಲದೇ ಇರುವವರು ಮಧ್ಯಪ್ರವೇಶಿಸಿ ತೊಂದರೆ ನೀಡಿದರೆ ಅದನ್ನು ಸಹಿಸಿಕೊಳ್ಳಬಾರದು ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆಯು ಯಾವಾಗಲು ಮೀನುಗಾರರ ಪರವಾಗಿದೆ. 8 ರಿಂದ 10ನೇ ತರಗತಿಯಲ್ಲಿ ಓದುವ ಮೀನುಗಾರರ ಮಕ್ಕಳಿಗೆ 2000 ರೂ. ಪಿಯುಸಿಯಲ್ಲಿ ವಿದ್ಯಾರ್ಥಿನಿಯರಿಗೆ 3 ಸಾವಿರ ರೂ., ವಿದ್ಯಾರ್ಥಿಗಳಿಗೆ 2500 ರೂ., ಎಲ್ ಎಲ್ ಬಿ ಸೇರಿದಂತೆ  ಬೇರೆ ಬೇರೆ ಕೋರ್ಸ್ ಒದುವ ವಿದ್ಯಾರ್ಥಿಗಳಿಗೆ 7500, ವಿದ್ಯಾರ್ಥಿನಿಯರಿಗೆ 8 ಸಾವಿರ ರೂ., ಎಂಬಿಬಿಎಸ್ ಓದುವವರಿಗೆ 10,000 ರೂ ಶಿಷ್ಯವೇತನ ನೀಡಲಾಗುತ್ತದೆ. ಐಎಎಸ್, ಐಪಿಎಸ್ ಓದ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೊಚಿಂಗ್ ಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮೀನುಗಾರಿಕೆ ವೃತ್ತಿಯಲ್ಲಿರುವವರು ಒಂದೇ ವೃತ್ತಿಯ ಮೇಲೆ ಅವಲಂಬಿತರಾಗದೇ ಬೇರೆ ಬೇರೆ ವೃತ್ತಿಯಲ್ಲಿ ತೊಡಗುವ ಪ್ರಾವಿಣ್ಯತೆ ಹೊಂದಬೇಕು. ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಸರ್ಕಾರವು ಬಡವರ ಪರವಾಗಿದೆ.‌ ಪ್ರತಿಯೊಬ್ಬ ಶಾಸಕರು ಎಲ್ಲರಿಗೂ ಸ್ಪಂದಿಸುತ್ತಿದ್ದಾರೆ. ಮೀನುಗಾರರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಉತ್ಪಾದನೆ ಹೆಚ್ಚಾಗಬೇಕು ಎಂದು ಸಚಿವರು ಸಲಹೆ ಮಾಡಿದರು.
ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10 ಸಾವಿರ ವಸತಿ ಮಂಜೂರಿ ಮಾಡಲಾಗಿದೆ.‌ ಇದರಿಂದಾಗಿ ಸೂಕ್ತವಾದ ದಾಖಲಾತಿ ಒದಗಿಸುವ ಅರ್ಹ ಬಡ ಮೀನುಗಾರರಿಗೆ ವಸತಿ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.
ಕಚೇರಿ ಸ್ಥಾಪನೆಗೆ ಒತ್ತು: ವಿಜಯನಗರ ಜಿಲ್ಲೆ ಹೇರಳವಾಗಿ ನೀರಿನ ಮೂಲ ಮತ್ತು ಸೌಕರ್ಯ ಇರುವ ಜಿಲ್ಲೆಯಾಗಿದೆ. ಬೃಹತ್ ತುಂಗಭದ್ರಾ ಡ್ಯಾಮಿದೆ. ಇಲ್ಲಿ ಮೀನುಗಾರರ ಸಂಖ್ಯೆ ಹೆಚ್ಚಿದೆ. ಸ್ವಂತ ಕಚೇರಿ ಇದ್ದಲ್ಲಿ ಕಚೇರಿ ಕಾರ್ಯಗಳಿಗೆ ಅನುಕೂಲವಾಗಲಿದೆ. ಜಿಲ್ಲಾಡಳಿತ ಜಾಗ ನೀಡಿದಲ್ಲಿ ಕೂಡಲೇ ಹೊಸ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಮೀನುಗಾರಿಕೆ ನಿರ್ದೇಶಕರ ದಿನೇಶ ಕಳ್ಳೇರ, ಮೀನುಗಾರಿಕೆ ಜಂಟಿ ನಿರ್ದೇಶಕ ಷಡಕ್ಷರಿ, ಮೀನುಗಾರಿಕೆ ಉಪ ನಿರ್ದೇಶಕ ಬಳ್ಳಾರಿಯ ಶಿವಣ್ಣ, ಸಿಂಧನೂರಿನ ಮಲ್ಲೇಶಿ, ರಾಯಚೂರಿನ ಬಸವನಗೌಡ, ಕೊಪ್ಪಳದ ಶ್ರೀನಿವಾಸ ಕುಲಕರ್ಣಿ, ಹಗರಿಬೊಮ್ಮನಹಳ್ಳಿಯ ರಿಯಾಜ್ ಅಹಮದ್, ಮುನಿರಾಬಾದನ ಕಣ್ಣಿ ಭಾಗ್ಯ ಸೇರಿದಂತೆ ಇಲಾಖೆಯ ವಿವಿಧ ಜಿಲ್ಲೆಗಳ ಹಿರಿಯ ಸಹಾಯಕ ನಿರ್ದೇಶಕರು,  ಇಲಾಖಾಧಿಕಾರಿಗಳು