ಬಿಡಿಸಿಸಿ ಬ್ಯಾಂಕ್‌ ನಿಂದ ಶೇ.4 ಲಾಭಾಂಶ ಘೋಷಣೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ):ಅ.25- ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) 2023– 24ನೇ ಸಾಲಿನಲ್ಲಿ 12.53 ಕೋಟಿ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 4ರಷ್ಟು ಲಾಭಾಂಶ ಘೋಷಿಸಿದೆ.
ಶನಿವಾರ  ಇಲ್ಲಿ ನಡೆದ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯ ನಂತರ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
 ಬ್ಯಾಂಕ್‌ ತನ್ನ ರೈತ ಪರ ಬದ್ಧತೆಯಲ್ಲಿ ವಿಶ್ವಾಸ ಇಟ್ಟು ಮುನ್ನಡೆದಿದೆ. ಬ್ಯಾಂಕ್‌ ನ ಶಾಸನಬದ್ಧ ಲೆಕ್ಕಪರಿಶೋಧನೆ ಮತ್ತು ನಬಾರ್ಡ್‌ ಪರಿವೀಕ್ಷಣೆಯಲ್ಲಿ ‘ಎ’ ದರ್ಚೆ ಪಡೆದಿದೆ. ‘ಸದೃಢ ಮತ್ತು ಸಶಕ್ತ ಬ್ಯಾಂಕ್‌’ ಎಂದು ನಬಾರ್ಡ್‌ ಪರಿಗಣಿಸಿರುವುದರಿಂದ ಉತ್ಸಾಹ ಇಮ್ಮಡಿಯಾಗಿದೆ ಎಂದು ಅವರು ಹೇಳಿದರು.
ಕೃಷಿಯೇತರ ಸಾಲ ನೀಡಿಕೆ ಪ್ರಮಾಣವನ್ನು 40 ಲಕ್ಷದಿಂದ 60 ಲಕ್ಷಕ್ಕೆ ಹೆಚ್ಚಿಸಲಾಗಿದೆ. 1,15,365 ರೈತರಿಗೆ 1,074 ಕೋಟಿ ಶೂನ್ಯ ಬಡ್ಡಿದರದ ಕೆಸಿಸಿ ಸಾಲ ನೀಡಲಾಗಿದೆ. ಕೃಷಿಯೇತರ ಸಾಲದ ಪ್ರಮಾಣ ಕೇವಲ ಶೇ 34ರಷ್ಟಿದೆ. ಸಾಲ ವಸೂಲಾತಿಯಲ್ಲಿ ಶೇ 94.56ರಷ್ಟು ಸಾಧನೆ ತೋರಿಸಲಾಗಿದ್ದು, ಎನ್‌ಪಿಎ ಪ್ರಮಾಣ ಶೇ 3.86ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.
ಮುಂದಿನ ಯೋಜನೆಗಳು: 10 ಲಕ್ಷದವರೆಗೆ ರೈತರಿಗೆ ಸ್ವಾಭಿಮಾನಿ ಕಿಸಾನ್‌ ಕ್ರೆಡಿಟ್ ಸಾಲ, ಆನ್‌ಲೈನ್‌ ಮೂಲಕವೇ ಕೆಸಿಸಿ ಸಾಲ ವಿತರಣೆ, ಅದಕ್ಕಾಗಿ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ, 14 ಹೊಸ ಶಾಖೆ ಆರಂಭ, ಬ್ಯಾಂಕ್‌ ಶಾಖೆ ಇಲ್ಲದ ಕಡೆಯಲ್ಲೂ ಆಫ್‌ಸೈಟ್‌ ಎಟಿಎಂ ಸ್ಥಾಪನೆಯ ಗುರಿ ಇದೆ ಎಂದು ಅಧ್ಯಕ್ಷರು ಹೇಳಿದರು.
ಬ್ಯಾಂಕ್‌ನ ಷೇರು ಬಂಡವಾಳ 127 ಕೋಟಿ, ಕಾಯ್ದಿಟ್ಟ ನಿಧಿ 158 ಕೋಟಿ, ಸ್ವಂತ ಬಂಡವಾಳ 226 ಕೋಟಿ, ದುಡಿಯುವ ಬಂಡವಾಳ 2,553 ಕೋಟಿ,  ಒಟ್ಟು ಠೇವಣಿ 1,563 ಕೋಟಿ, ಒಟ್ಟು ವಿತರಿಸಿದ ಸಾಲ 1,511 ಕೋಟಿ, ಒಟ್ಟು ಹೂಡಿಕೆ 646 ಕೋಟಿ ಹಾಗೂ ಸಿ.ಆರ್.ಎ.ಆರ್. ಶೇ 12.80ರಷ್ಟಿದೆ ಎಂದು ಅವರು ವಿವರಿಸಿದರು.
ಶೂನ್ಯ ಬಡ್ಡಿ ಘೋಷಿಸಿದ್ದ ರಾಜ್ಯ ಸರ್ಕಾರದಿಂದ ಬ್ಯಾಂಕ್‌ಗೆ ₹11.39 ಕೋಟಿ ಬರುವುದು ಬಾಕಿ ಇದೆ. ಈ ಮೊತ್ತ ಬಂದರೆ ಬಹಳ ಅನುಕೂಲವಾಗುತ್ತದೆ
ಕೆ.ತಿಪ್ಪೇಸ್ವಾಮಿ,
ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್‌