ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಒಂದು ಅದ್ಭುತ ಕಾರ್ಯಕ್ರಮ: ಚಂದ್ರಶೇಖರಗೌಡ ಪಾಟೀಲ
ವಿಜಯಪುರ,ಆ.25:ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನಡೆಸುವ ಅತ್ಯಂತ ಮಹತ್ವದ ಕಾರ್ಯಕ್ರಮಗಳಲ್ಲಿ “ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ” ಒಂದು ಅತ್ಯುತ್ತಮ ಕಾರ್ಯಕ್ರಮ ಎಂದು ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಮನಗೂಳಿಯ ಗಣ್ಯರಾದ ಚಂದ್ರಶೇಖರಗೌಡ ಪಾಟೀಲ ಅಭಿಪ್ರಾಯಪಟ್ಟರು.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಕೆ.ಜಿ.ಎಂ.ಪಿ.ಎಸ್ ಶಾಲೆಯ ಸಭಾಂಗಣದಲ್ಲಿ ಶನಿವಾರ ಜರುಗಿದ 2024-25 ನೇ ಸಾಲಿನ ಮನಗೂಳಿ ಕ್ಲಸ್ಟರ್ 1ರ ಪ್ರತಿಭಾ ಕಾರಂಜಿ ಹಾಗೂ ಕಲ್ಪೋತ್ಸವದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕುವಲ್ಲಿ ಇದೊಂದು ಅದ್ಭುತ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಸವನಬಾಗೇವಾಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರು ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ನಮ್ಮವರೇ. ಹಾಗಾಗಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ನಿರ್ಣಯ ನೀಡುವ ಕಾರ್ಯ ನಿರ್ಣಾಯಕರೆಲ್ಲ ಸೇರಿ ಮಾಡಬೇಕೆಂದು ನಿರ್ಣಾಯಕರಿಗೆ ಕರೆಕೊಟ್ಟರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಭಾರತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಬಿ. ಸಜ್ಜನಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಡಾ. ಮಾಧವ ಗುಡಿ ನಿರೂಪಿಸಿದರು. ಡೋಣೂರ ಸಮೂಹ ಸಂಪನ್ಮೂಲ ವ್ಯಕ್ತಿ ಎಚ್.ಎಸ್ ಡೊಮ್ಮನಾಳ ವಂದಿಸಿದರು.