ಮಠಗಳು ಕನ್ನಡ ಪ್ರಸಾರಕ್ಕೆ ಸಾಕಷ್ಟು ಕೊಡುಗೆ ನೀಡಿವೆ
ಧಾರವಾಡ,ಆ25: ಕರ್ನಾಟಕದಲ್ಲಿ ಉರ್ದು ಮತ್ತು ತೆಲಗು ಭಾಷೆಯ ಶಿಕ್ಷಣಕ್ಕೆ ಹೇಗೆ ಒತ್ತು ನೀಡಲಾಗುತ್ತಿದೆಯೋ ಅದೇ ರೀತಿ ಆಂಧ್ರಪ್ರದೇಶದಲ್ಲಿಯೂ ಕನ್ನಡ ಶಾಲೆಗಳನ್ನು ತೆರೆದು ಕಲಿಕೆಗೆ ಆದ್ಯತೆ ನೀಡಬೇಕು ಎಂದು ಬಳ್ಳಾರಿ ಚೌಕಿಮಠದ ಮರಿರಾಚೋಟಿ ಮಹಾಸ್ವಾಮಿಗಳು ಹೇಳಿದರು.
ಕರ್ನಾಟಕ ವಿದ್ಯಾ ವರ್ಧಕ ಸಂಘ ಆಂದ್ರಪ್ರದೇಶದ ಆದವಾನಿಯಲ್ಲಿ ಆಯೋಜಿಸಿದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9 ನೇ ಮಹಾಮೇಳದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಸ್ವಾಮಿಗಳು ಮಠಗಳೆಂದರೆ ಕೇವಲ ಪೂಜೆ ಪುನಸ್ಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ ನಾಡಿನಲ್ಲಿ ಕನ್ನಡ ಪ್ರಸಾರಕ್ಕೂ ಸಾಕಷ್ಟು ಕೊಡುಗೆಯನ್ನು ನೀಡಿವೆ, ಭಾಗದಲ್ಲಿನ ಕನ್ನಡ ಕಲಿಯುವ ಮಕ್ಕಳಿಗಾಗಿ ಚೌಕಿಮಠವು ವಸತಿ ಮತ್ತು ಪ್ರಸಾದದ ವ್ಯವಸ್ತೆಯನ್ನು ಮಾಡುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಸಹರಿಸಿದೆ. ಇಲ್ಲಿಯ ಜನರ ಮನೆ ಮಾತು ಕನ್ನಡವಾದರೂ ಸಹ ಮಕ್ಕಳಿಗೆ ಕನ್ನಡ ಕಲಿಯಲೂ ಶಾಲೆಗಳು ಇಲ್ಲದಂತಾಗಿದ್ದು ಕರ್ನಾಟಕ ಸರ್ಕಾರವು ಈ ಬಗ್ಗೆ ಗಮನ ಹರಿಸಿ ನಮ್ಮ ರಾಜ್ಯದ ಗಡಿಗಳಲ್ಲಿ ಕನ್ನಡ ಶಾಲೆಗಳನ್ನು ತೆರೆÉಯಿಸಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಮಾತನಾಡಿ ಕರ್ನಾಟಕದ ಏಕೀಕರಣಕ್ಕೆ ಬಳ್ಳಾರಿಯ ಕೊಡುಗೆ ಅಪಾರವಾಗಿದೆ. ಅದರಲ್ಲೂ ಥಾಮಸ್ ಮಂಟ್ರೋ ಏಕೀಕರಣದ ರೂವಾರಿಯಾಗಿದ್ದಾನೆ ಎಂದರು. ಸ್ವಾತಂತ್ರ್ಯ ಮತ್ತು ಏಕೀಕರಣದ ಮೊದಲು ನೆರೆಯ ಭಾಷೆಯಿಂದ ಕನ್ನಡದ ರಕ್ಷಣೆ ಹೇಗೆ ಎನ್ನುವ ಚಿಂತೆ ಕಾಡಿತ್ತು ಆದರೆ ಇಂದು ಆಂಗ್ಲ ಭಾಷೆಯಿಂದ ಭಾರತೀಯ ಭಾಷೆಗಳನ್ನು ಹೇಗೆ ರಕ್ಷಿಸಿಕೊಳ್ಳುಬೇಕು ಎನ್ನುವದು ಕಾಡುತ್ತಿದೆ, ಅದರಲ್ಲೂ ಕರ್ನಾಡಕದ ಗಡಿ ಭಾಗವಾದ ಇಲ್ಲಿ ಹಲವಾರು ಮಹನಿಯರು ಕನ್ನಡದ ನೆಲ,ಜಲ, ಭಾಷೆಗಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರ್ರಾಸ್ತಾವಿಕವಾಗಿ ಬಸವಪ್ರಭು ಹೊಸಕೇರಿ ಮಾತನಾಡಿದರು, ಬಾ.ನಿ. ಲಕ್ಷ್ಮೀನರಸಮ್ಮ ಬರೆದ ಮಾರುತಾತ್ಮಜಂ ಗ್ರಂಥ ಲೋಕಾರ್ಪಣೆ ಮಾಡಲಾಯಿತು.
ಈ ವೇಳೆ ವೇದಿಕೆಯಲ್ಲಿ ಕಲ್ಮಠದ ಗುರುಸಿದ್ದ ದೇವರು. ಕವಿವಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ. ಉಪಾಧ್ಯಕ್ಷೆ ಮಾಲತಿ ಪಟ್ಟಣಶಟ್ಟಿ. ಕೆ.ಶರಣಬಸಪ್ಪ. ಕೆ.ಸೂಗೂರಪ್ಪ. ಜಿ. ವೆಂಕಟರಮಣರೆಡ್ಡಿ.ಶ್ರೀನಿವಾಸರೆಡ್ಡಿ ನಾಗನಾಥನಹಳ್ಳಿ, ಬ. ರ. ವೀರಭದ್ರಗೌಡ, ಎಚ್ ಶಿವಶಂಕರಗೌಡ, ಕೆ. ರಾಮು, ತೋವಿ ಶ್ರೀ ಶಿವರುದ್ರಪ್ಪ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿ. ಸುಬ್ರಹ್ಮಣ್ಯ ಶರ್ಮಾ ಹಾಗೂ ಶಂಕರ ಹಲಗತ್ತಿ ಸ್ವಾಗತಿಸಿದರು. ಎಚ್. ಎಂ. ವೀರಶ್ರೀ, ಎನ್. ಎಂ. ಚನ್ನಬಸವ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.