ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ
ಬೈಲಹೊಂಗಲ,ಆ25: ಲಿಂಗಾಯತ ಧರ್ಮದ ಒಳಪಂಗಡಗಳನ್ನು ಒಂದುಗೂಡಿಸುವಲ್ಲಿ ಸಂಘಟಾತ್ಮವಾಗಿ ವಿಧಾಯಕ ಕಾರ್ಯಗಳಿಂದ ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾದ ಸಾಧನೆಗಳು ಸಮಾಜದಲ್ಲಿ ಯಶಸ್ವಿಯಾಗಲಿ ಎಂದು ಬೆಳಗಾವಿ- ನಾಗನೂರಿನ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಇಂಚಲ ಕ್ರಾಸ್ ಹತ್ತಿರದ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾ ಘಟಕದ ಆಶ್ರಯದಲ್ಲಿ ಜರುಗಿದ 2023-24 ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾನಿದ್ಯ ವಹಿಸಿ ಮಾತನಾಡಿ, ಪ್ರತಿಭೆಗಳನ್ನು ಗೌರವಿಸುವದರಿಂದ ಮತ್ತೂಬ್ಬರ ಸಾಧನೆಗೆ ಇಂಥಹ ಚಟುವಟಿಕೆಗಳು ಪ್ರೇರಣೆಯಾಗಲಿವೆ. ದೇಶ ಸುಭದ್ರವಾಗಬೇಕಾದರೆ ಯುವ ಸಮೂಹ ಕ್ರಿಯಾಶೀಲರಾಗಿ ಮುನ್ನೆಡೆದಾಗ ಮಾತ್ರ ಸಾಧ್ಯವೆಂದರು.
ಹುಬ್ಬಳ್ಳಿಯ-ಬೈಲಹೊಂಗಲದ ರುದ್ರಾಕ್ಷಿಮಠದ ಪೂಜ್ಯ ಬಸವಲಿಂಗ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಹಲವಾರು ಪಂಗಡ, ಸಂಘಟಣೆಗಳಿದ್ದು ಅವರೆಲ್ಲರೂ ಒಗ್ಗೂಡಿದಾಗ ಮಾತ್ರ ಸ್ವತಂತ್ರ ಧರ್ಮದ ಮಾನ್ಯತೆ ಸಾಧ್ಯವಾಗಲಿದೆ. ತಾರತಮ್ಯ ಮಾಡದೇ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅತ್ಯವಶ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕ ಎಂಬ ಘೋಷಣೆ ಮಾಡಿ ಜಾಗತಿಕ ಮಟ್ಟಕ್ಕೆ ಗೌರವ ತಂದಿದ್ದು ಸಮಾಜಕ್ಕೆ ಹೆಮ್ಮೆಯಾಗಿದೆ ಎಂದರು.
ಗುರುಗುಂಟಾದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ.ಶಾಸಕ ಮಹಾಂತೇಶ ಕೌಜಲಗಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ ಅವರು ಮುಂಜಾನೆ ನಡೆದ ಷಟಸ್ಥಳ ಧ್ವಜಾರೋಹಣ ನೆರವೇರಿಸಿ ಇಷ್ಟ ಲಿಂಗಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಮಸಾಲಿ ಸಮಾಜದ ಮುಖಂಡ ಶ್ರೀಶೈಲ ಬೋಳಣ್ಣವರ ನೇತೃತ್ವ ವಹಿಸಿದ್ದರು. ಶರಣೆ ಪ್ರೇಮಾ ಅಂಗಡಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಚಿತ್ರನಟ ಶಿವರಂಜನ ಬೋಳಣ್ಣವರ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಮಾಜಿ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ, ನಿರ್ದೇಶಕರಾದ ಮಹಾಂತೇಶ ಮತ್ತಿಕೊಪ್ಪ, ರಾಜು ಕುಡಸೋಮಣ್ಣವರ, ಶ್ರೀಶೈಲ ಶರಣಪ್ಪನವರ, ಡಾ.ಶರಣಕುಮಾರ ಅಂಗಡಿ, ಉದ್ಯಮಿ ವಿಜಯ ಮೆಟಗುಡ್ಡ, ಸದಾನಂದ ನಂಜಪ್ಪನವರ, ಪ್ರೇಮಾ ಅಂಗಡಿ, ಶ್ರೀಕಾಂತ ಮಾಳಕ್ಕನವರ, ಉಮೇಶ ಬಾಳಿ, ಕಾಂಗೈ ಮುಖಂಡ ನಾನಾಸಾಹೇಬ ಪಾಟೀಲ, ಕಜಾಪ ಯುವ ಮುಖಂಡ ಸುಭಾಶ ತುರಮರಿ, ಕಾಂಗೈ ಮುಖಂಡ ಕಾರ್ತಿಕ ಪಾಟೀಲ, ಡಾ.ಮಹಾಂತೇಶ ಕಳ್ಳಿಬಡ್ಡಿ, ಅಂಬಿಗರ ಸಮಾಜದ ಮುಖಂಡ ಮಲ್ಲಪ್ಪ ಮುರಗೋಡ, ಕುರುಬರ ಸಂಘದ ಅಧ್ಯಕ್ಷ, ವಿಜಯಕುಮಾರ ದಳವಾಯಿ, ಸಂತೋಷ ಕೊಳವಿ, ಬಾಳನಗೌಡಾ ಪಾಟೀಲ ಮುಂತಾದವರು ವೇದಿಕೆ ಮೇಲಿದ್ದರು.
ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾ ಘಟಕದ ಸದಸ್ಯರು, ಸಾಧಕ ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಲೂಕಾ ಸಂಘಟನೆಯ ಅಧ್ಯಕ್ಷ ಉಮೇಶ ಬೋಳೆತ್ತಿನ ಸ್ವಾಗತಿಸಿದರು. ನಿವೃತ ಶಿಕ್ಷಕಿ ಗೌರಮ್ಮ ಕರ್ಕಿ ನಿರೂಪಿಸಿದರು. ನಗರ ಘಟಕ ಅಧ್ಯಕ್ಷ ಮಹೇಶ ಕೋಟಗಿ ವಂದಿಸಿದರು. ಸುಮಾರು 150 ಕ್ಕೂ ಹೆಚ್ಚಿನ ಸಾಧಕ ವಿದ್ಯಾರ್ಥಿಗಳನ್ನು, ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಂಘಟನೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.