ಆ೨೭ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿ ಪ್ರತಿಭಟನಾ ಮೆರವಣಿಗೆ
ರಾಯಚೂರು,ಆ.೨೫ – ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಖಂಡಿಸಿ ಎಲ್ಲ ಸಮುದಾಯ ನಾಯಕರಿಂದ ಆಗಸ್ಟ್ ೨೭ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ. ಶಾಂತಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ ಎಂದ ಅವರು, ಸಿ.ಎಂ. ಸಿದ್ದರಾಮಯ್ಯ ಮುಡಾ ಹಗರಣದ ಬಗ್ಗೆ ಅಪಪ್ರಚಾರ, ಕಪ್ಪು ಚುಕ್ಕಿ ಬಳಿಯಲು ಬಿಜೆಪಿ, ಜೆಡಿಎಸ್ ಮೈತ್ರಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಬಡವರು, ಶೋಷಿತ ಸಮುದಾಯದ ಪರ ಆಡಳಿತ, ರಾಜಕೀಯ ಜೀವನದಲ್ಲಿ ಒಳ್ಳೆಯ ಹೆಸರು, ಹಾಲುಮತ ಸಮಾಜದಲ್ಲಿ ಹುಟ್ಟಿದರೂ ಅನೇಕ ಹಿಂದುಳಿದ ಜಾತಿಗಳ ಅನೇಕ ಏಳಿಗೆಗಾಗಿ, ಹಕ್ಕುಗಳಿಗೆ ಧ್ವನಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದಾರೆ.ದಕ್ಷಿಣ ಭಾರತ, ರಾಜ್ಯದ ಧೀಮಂತ ನಾಯಕ ಸಮಾಜಿಕ ನ್ಯಾಯದ ಪರವಾಗಿ ರಾಜ್ಯ ಮುನ್ನಡೆಸುವ ಶಕ್ತಿ, ಸಾಮರ್ಥ್ಯ ಸಿದ್ದರಾಮಯ್ಯನವರಿಗಿದೆ ಎಂದರು.
ರಾಜ್ಯಪಾಲರ ನಡೆಯಿಂದ ರಾಜ್ಯದ ೭ ಕೋಟಿ ಜನರಿಗೆ ನೋವಾಗಿದೆ. ರಾಜ್ಯ, ರಾಷ್ಟ್ರೀಯ ನಾಯಕರು ಬೆಂಬಲ ನೀಡುತ್ತಿದ್ದಾರೆ. ತಂತ್ರ,ಕುತಂತ್ರದಿಂದ ತೊಂದರೆ ಯಾದರೆ ರಾಜ್ಯದ ಎಲ್ಲಾ ಸಮುದಾಯಗಳು ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಯನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ರಾಜ್ಯಪಾಲರಿಂದ ಬಿಜೆಪಿ, ಜೆಡಿಎಸ್ ಮೈತ್ರಿ ನಾಯಕರು ಮಾಡುತ್ತಿದ್ದಾರೆ. ಯಾವುದೇ ಸಮಿತಿ, ಆಯೋಗದ ವರದಿ ಇರಲಾರದೇ ಒಬ್ಬ ಖಾಸಗಿ ವ್ಯಕ್ತಿ ಅಬ್ರಾಹಂ ದೂರಿನ ಮೇರೆಗೆ ಪ್ರಾಸಿಕ್ಯೂಷನ್ ವಿಚಾರಣೆಗೆ ಅನುಮತಿ ನೀಡಿರುವುದು ಖಂಡನೀಯ. ಹಿಂದೆ ಅನೇಕರ ನಾಯಕರ ವಿರುದ್ದ ದೂರುಗಳಿದ್ದರೂ ಪ್ರಾಸಿಕ್ಯೂಷನ್ ಅನುಮತಿ ನೀಡಿಲ್ಲ. ಇದರಲ್ಲಿ ಸಂಚು ಇದೆ ಎಂದು ಆರೋಪಿಸಿದರು.
ಜನಪ್ರಿಯ ನಾಯಕತ್ವ, ಜಮಪರ ಯೋಜನೆ, ಕಾರ್ಯಕ್ರಮಗಳಲ್ಲಿ ಜನರನ್ನು ನೋಡಿ ಅವರಿಗೆ ದಿಗಿಲಾಗಿದೆ ಭಯ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿದರೆ ಯಾಕಿಷ್ಟುಉರಿ ಬಿಜೆಪಿ,ಜೆಡಿಎಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಯಾಕೆ, ದೇವರಾಜು ಅರಸು ಅವರಿಗೂ ಈ ಕುತಂತ್ರ ಮಾಡಲಾಗಿತ್ತು. ದಲಿತ,ಹಿಂದುಳಿದ, ಎಲ್ಲಾ ವರ್ಗಗಳ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದಕ್ಕೆ ಅವರನ್ನು ರಾಜಕೀಯವಾಗಿ ಮುಗಿಸಿ, ರಾಜ್ಯದ ನೆರೆಯ ನೆಲೆ ವಿಸ್ತರಿಸಿಕೊಳ್ಳಲು ಕುತಂತ್ರ ನಡೆದಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲ ಸಮುದಾಯದ ಜನರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಕಾಂತರಾವ್ ವಕೀಲ, ವಿ. ಲಕ್ಷ್ಮೀರೆಡ್ಡಿ, ಬಸವರಾಜ, ಜಿ.ಸುರೇಶ, ಸುರೇಖಾ,ಸುರೇಂದ್ರ, ಪಂಪಾಪತಿ, ಜಂಬಣ್ಣ, ಸಿ.ಪಾಂಡು ಸೇರಿದಂತೆ ಇತರರು ಉಪಸ್ಥಿತರಿದ್ದರು.