ಹಿಂದೂಗಳ ಮಹತ್ವದ ಧಾರ್ಮಿಕ ಹಬ್ಬ ಶ್ರೀಕೃಷ್ಣ ಜನ್ಮಾಷ್ಠಮಿ: ಶೃತಿ ಬಿರಾದಾರ
ಭಾಲ್ಕಿ:ಆ.25: ಹಿಂದೂಗಳಲ್ಲಿ ಅತ್ಯಂತ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿರುವ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬವಾಗಿದೆ ಎಂದು ಅಥರ್ವ ಪೂರ್ವಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಶೃತಿ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು.
ಪಟ್ಟಣದ ಅಥರ್ವ ಪೂರ್ವಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದೂಗಳು ಅತ್ಯಂತ ಸಂಭ್ರಮ ಮತ್ತು ಸಡಗರದಿಮದ ಆಚರಿಸಲಾಗುವ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಠಮಿ ಮಹತ್ವದ ಹಬ್ಬವಾಗಿದೆ. ಶ್ರೀಕೃಷ್ಣನ ಜನ್ಮ ಉತ್ಸವ ಭಗವಾನ ಕೃಷ್ಣನ ಜನ್ಮ ವಾರ್ಷಿಕೋತ್ಸವವಾಗಿದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು. ಕೃಷ್ಣ ಜನ್ಮಾಷ್ಠಮಿಯನ್ನು ಗೋಕುಲಾಷ್ಟಮಿಯಂದಲೂ ಕರೆಯುತ್ತಾರೆ. ಕೃಷ್ಣನ ನೆನೆದರೆ ಕಷ್ಟಗಳೆಲ್ಲ ದೂರ ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನವಾಗಿದೆ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಣಾಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಕೃಷ್ಣ ಜನ್ಮಾಷ್ಟಮಿಯಂದು ದೇಶದ ಎಲ್ಲಾ ದೇಗುಲಗಳನ್ನು ಅಲಂಕರಿಸಿ ಸಂಭ್ರಮಿಸಲಾಗುವುದು. ಶ್ರೀಕೃಷ್ಣನು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನ್ಮತಾಳಿದ ಮಹಾಪುರುಷ ಎಂದು ಪುರಾಣಗಳಿಂದ ತಿಳಿದು ಬಂದಿದೆ ಎಂದು ಹೇಳಿದರು.
ಇದೇವೇಳೆ ಶಾಲೆಯ ಪುಟಾಣಿ ಮಕ್ಕಳು ಕೃಷ್ಣ, ರಾಧೆಯ ವೇಷತೊಟ್ಟು ಸಂಭ್ರಮ ಪಟ್ಟರು. ಶಾಲೆಯಲ್ಲಿ ರಾಧಾ ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಾಧಾ ಕೃಷ್ಣರ ವೇಷತೊಟ್ಟು, ಶ್ರೀಕೃಷ್ಣರ ಹಾಡುಗಳಿಗೆ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು. ಪುಟಾಣಿ ಮಕ್ಕಳು ಚಾಕಲೇಟ ತುಂಬಿದ ಮೊಸರು ಗಡುಗೆ ಒಡೆದು ಸಂಬ್ರಮಿಸಿದರು.
ಈ ಸಂದರ್ಭದಲ್ಲಿ ಕಿರ್ತಿ ವಿಜಯಕುಮಾರ ಸೇರಿದಂತೆ ಶಾಲೆಯ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.