ದೇವಾಲಯಕ್ಕೆ ಭಾರತೀಯರಿಂದ ಹೆಚ್ಚು ಪ್ರಾಮುಖ್ಯತೆ
ಬಾಗೇಪಲ್ಲಿ,ಆ೨೫:ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳು, ದೇಹಕ್ಕಿಂತ ದೇವಾ ಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಗುಂಜೂರು ಆರ್. ಶ್ರೀನಿವಾಸರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಗುಂಡ್ಲಪಲ್ಲಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಕಳಶ ಸ್ಥಾಪನೆ, ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ದೇವಾಲಯಗಳು ಶ್ರದ್ದಾ, ಭಕ್ತಿ ಮತ್ತು ಶಾಂತಿಗೆ ಪ್ರತೀಕ. ದೇವರಿಗೆ ಮೇಲು ಕೀಳು, ಶ್ರೀಮಂತ, ಬಡವರೆಂಬ ಭೇದ ಭಾವವಿಲ್ಲ.
ಇವೆಲ್ಲಾ ಜನರು ಸೃಷ್ಟಿ ಮಾಡಿಕೊಂಡಿರುವುದು. ಜನರು ತಮ್ಮ ಧರ್ಮವನ್ನು ಆಚರಿಸುವುದರ ಜೊತೆಗೆ ಅನ್ಯ ಧರ್ಮ ಗಳನ್ನು ಗೌರವಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಧಾರ್ಮಿಕ ಕೇಂದ್ರಗಳು ಸಮಾಜದಲ್ಲಿ ಜನರ ನಡುವೆ ಒಗ್ಗಟ್ಟನ್ನು ಮೂಡಿಸುವ ಕೆಲಸ ಮಾಡಬೇಕೆ ಹೊರತು ಜನರ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಧರ್ಮ ಭೂಮಿ ಎನಿಸಿದ ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ.
ಸತ್ಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಹಿಡಿಯಲು ಈ ನಾಡಿನ ಮಠ ಮಂದಿರಗಳು ಕೆಲಸ ಮಾಡುತ್ತಾ ಬಂದಿವೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಭಕ್ತಿ ಅಪಾರ. ಆಧುನಿಕತೆಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕಲುಷಿತಗೊಳಿಸಬಾರದು. ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳು, ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಭಕ್ತಾಧಿಗಳು ಹಾಜರಿದ್ದು ದೇವರ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಪುನೀತರಾದರು.