ಬೀದಿಯಲ್ಲಿ ಬಟ್ಟೆ ಮಾರುವಾತನ ಪುತ್ರನಿಗೆವೈದ್ಯ ಪಿಜಿಯಲ್ಲಿ 5090 ಱ್ಯಾಂಕ್
ಎನ್.ವೀರಭದ್ರಗೌಡ
ಬಳ್ಳಾರಿ:ಅ,25 : ವಿದ್ಯೆ ಎಂಬುದು ಯಾರ ಸೊತ್ತು ಅಲ್ಲ. ವಿದ್ಯೆಗೆ ಹಣವೇ ಬೇಕೆಂದಿಲ್ಲ. ಕಲಿಯುವ ಛಲವೊಂದಿದ್ದರೆ ಬಡತನದ ಬೇಗೆಯನ್ನು ದೂರವಿರಿಸಿ  ಉನ್ನತ ಪದವಿಗಳನ್ನು ಪಡೆಯಬಹುದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ನಗರದ ಈ ಸತೀಶ್.
ನಗರದ ದೊಡ್ಡ ಮಾರುಕಟ್ಟೆ ಬಳಿ ತಳ್ಳುವ ಬಂಡಿಯಲ್ಲಿ ಬಟ್ಟೆ ವ್ಯಾಪಾರ ಮಾಡಿ ಬದುಕು ಸಾಗಿಸುವ ಆನಂದ್ ಅವರ ಜೀವನದಲ್ಲಿ ಪುತ್ರ ಡಾ.ಬಿ.ಸತೀಶ್ ಮೆಡಿಕಲ್ ಪಿ.ಜಿ.ನೀಟ್ ಪರೀಕ್ಷೆಯಲ್ಲಿ 5090 ಅಂಕಗಳಿಸುವ ಮೂಲಕ ಮತ್ತಷ್ಟು ಆನಂದ ತಂದಿದ್ದಾರೆ.
ನಗರದ ದೊಡ್ಡ ಮಾರುಕಟ್ಟೆ ಬಳಿಯ ನೀಲಕಂಠೇಶ್ವರ ದೇವಸ್ಥಾನದ ಬಳಿ ನೂಕುವ ಬಂಡಿಯಲ್ಲಿ ವಿವಿಧ ರೀತಿಯ ಬಟ್ಟೆ, ಮಕ್ಕಳ ಆಟಿಕೆ, ಆಯಾ ಹಬ್ಬಗಳ ಸಂದರ್ಭದಲ್ಲಿ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿ ಈ ಆನಂದ್. ಇವರ ತಂದೆ ಮೂಲತಃ ಆಂದ್ರಪ್ರದೇಶದವರು. ಬಳ್ಳಾರಿಗೆ ಜೀವನ ನಡೆಸಲು ಬಂದವರು. ಅವರು ಮಗ ಆನಂದ್ ಅವರನ್ನು ಓದಿಸಲು ಪ್ರಯತ್ನಿಸಿದ್ದರೂ. ಬಡತನದಿಂದಾಗಿ ಏಳನೇ ತರಗತಿ‌ನಂತರ ಓದಲು ಆಗದೆ. ದುಡಿಮೆಗೆ  ಮುಂದಾದರು.
ಆದರೆ ಅಂದೇ ಸಂಕಲ್ಪ ಮಾಡಿದಂತೆ ತಾವು ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೇನು. ಮಕ್ಕಳ ಮೂಲಕ ತನ್ನ ಆಶಯ ಈಡೇರಿಲಿ ಎಂದುಕೊಂಡಿದ್ದರಂತೆ.
ಅದರಂತೆ ಪತ್ನಿ ಶೋಭಾ ಜೊತೆ ಸೇರಿ ಎಷ್ಟೇ ಕಷ್ಟ ಬಂದರೂ ಮಗಳು ಮೇಘಳನ್ನು ಇಂಜಿನೀಯರಿಂಗ್ ಮಾಡಿಸಿದರೆ. ಓರ್ವ ಮಗ ಮಹೇಶ್ ಎಂಎಸ್ ಸಿ ಬಿಇಡಿ ಮಾಡಿದ್ದಾರೆ. ಕೊನೆಯ ಮಗ ಸತೀಶ್ ನನ್ನು ವೈದ್ಯನನ್ನಾಗಿ ಮಾಡಲು ಕಂಡ ಕನಸು ನನಸಾಗಿಸಿಕೊಂಡಿದ್ದಾರೆ ಆನಂದ್.
ಸತೀಶ್ ಚಿಕ್ಕಂದಿನಿಂದಲೂ ಉತ್ತಮ ಅಭ್ಯಾಸ ಮಾಡುತ್ತಾ ಬಂದಿದ್ದಾನೆ. ಎಸ್ ಎಸ್ ಎಲ್ ಸಿಯಲ್ಲಿ  ನಗರದ ವಾರ್ಡ್ಲಾ ಶಾಲೆಯಲ್ಲಿ ಓದಿ ಶೇ 80.32
ಅಂಕಪಡೆದರೆ. ಪಿಯುಸಿಯನ್ನು ಬಿಪಿಎಸ್ ಸಿ ಕಾಲೇಜಿನಲ್ಲಿ ಓದಿ 94.33 ಅಂಕಪಡೆದು. ನೀಟ್ ನಲ್ಲಿ 2000 ನೇ ರ‌್ಯಾಂಕ್ ಪಡೆದು ರಾಯಚೂರಿನ ರಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ.
ಜೊತೆಗೆ ಯಾವುದೇ ಕೋಚಿಂಗ್ ಗೆ ಹೋಗದೆ ಮೆಡಿಕಲ್ ಸ್ನಾತಕೋತ್ತರ(ಪಿ.ಜಿ) ಪದವಿಗಾಗಿ ನಡೆದ ನೀಟ್ ಪರೀಕ್ಷೆಯಲ್ಲಿ 5090 ನೇ ರ‌್ಯಾಂಕ್ ಪಡೆದು. ತಮ್ಮ ತಂದೆ ಆನಂದ್ ಅವರ ಮುಖದಲ್ಲಿ ಮತ್ತಷ್ಟು ಆನಂದ್ ಮೂಡುವಂತೆ ಮಾಡಿದ್ದಾರೆ.
ಸರ್ಜರಿ ಇಲ್ಲಾ ಗೈನಾಕಲಜಿಯಲ್ಲಿ ಪಿಜಿ ಮಾಡಿ ಉತ್ತಮ ವೈದ್ಯನಾಗಿ  ಜನ ಸೇವೆ ಮಾಡಲು ಸತೀಶ್ ಬಯಸಿದ್ದಾರಂತೆ.
ವಿದ್ಯಾಭ್ಯಾಸಕ್ಕೆ ತನ್ನ  ದುಡಿಮೆಯೊಂದೇ ಸಾಲದು. ಬ್ಯಾಂಕ್ ನಲ್ಲಿ  ಮಕ್ಕಳ ಹೆಸರಲ್ಲಿ ಶೈಕ್ಷಣಿಕ ಸಾಲವನ್ನು ಪಡೆದಿರುವೆ ಎಂದು ತಂದೆ ಆನಂದ್ ಹೇಳಿದ್ದಾರೆ. ಅವರ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದು ಅವರಿಗೆ ಬಿಟ್ಟದ್ದು. ನಮ್ಮದೇನಿದ್ದರೂ ಪ್ರಯತ್ನ ಅಷ್ಟೇ ಎನ್ನುತ್ತಾರೆ.