ಜನಪದ ವಾದ್ಯಗಳು ನೋವಿನ ಧ್ವನಿಯಾಗಿವೆ : ಬಸವರಾಜ ಹೂಗಾರ
ಬೀದರ:ಆ.25: ಜನಪದ ವಾದ್ಯಗಳು ಮನರಂಜನೆಗಾಗಿ ಹುಟ್ಟಿಕೊಳ್ಳದೆ ಶ್ರಮಿಕ ವರ್ಗದವರ ಮತ್ತು ಕಲಾವಿದರ ನೋವಿನ ಧ್ವನಿಯಾಗಿವೆ. ವಾದ್ಯಗಳು ಮನುಷ್ಯರಿಂದ ನಿರ್ಮಿತವಾದವುಗಳೇ ವಿನಃ ದೇವತೆಗಳಿಂದಲ್ಲ ಎಂಬ ಮಾತಂಗ ಮುನಿಯ ಮಾತಿನಂತೆ ಅವು ಸಮಾಜದ ದನಿಯಾಗಿವೆ. ಅವು ಬದುಕಿನ ನೋವು ಮರೆಸುತ್ತವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ತಿಳಿಸಿದರು.
ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಬೀದರ ವತಿಯಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಜಾನಪದ ಸಂಭ್ರಮ, ಕವಿಗೋಷ್ಟಿ, ವಿಚಾರ ಸಂಕಿರಣ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಣ್ಣಾಭಾವು ಸಾಠೆಯವರ ಜನ್ಮದಿನದ ಪ್ರಯುಕ್ತ ಇಂದು ಸಂವಿಧಾನದ ಕುರಿತು ಕವಿಗೋಷ್ಟಿ ಆಯೋಜಿಸಿದ್ದು ಶ್ಲಾಘನೀಯ. ಮಾತನಾಡಲು, ಅಭಿವ್ಯಕ್ತಪಡಿಸಲು ಆಗದೇ ಇರುವಂತಹ ಇಂದಿನ ದಯನೀಯ ಸ್ಥಿತಿಯಲ್ಲಿ ಕವನಗಳ ಮೂಲಕ, ವಾದ್ಯಗಳ ಮೂಲಕ ಸಂವಿಧಾನದ ಆಶಯಗಳನ್ನು ಜನಮನಗಳಿಗೆ ತಲುಪಿಸಲು ಕವಿಗೋಷ್ಠಿ ಹಮ್ಮಿಕೊಂಡಿದ್ದು ಅಭಿನಂದನೀಯ ಕಾರ್ಯವಾಗಿದೆ. ಡಾ. ಬಾಬಾ ಸಾಹೇಬರು ಒಂದು ಸಮುದ್ರವಿದ್ದಂತೆ. ಅಪಾರ ಜ್ಞಾನಭಂಡಾರ ನಮಗೆ ನೀಡಿ ಹೋಗಿದ್ದಾರೆ. ಅವರ ವಿಚಾಋಧಾರೆಗಳನ್ನು ಕಿರುಬೆರಳಾಗಿ, ಹೆಗಲೆಣೆಯಾಗಿ ಮುನ್ನಡೆಸಿಕೊಂಡು ಬಂದವರು ಅಣ್ಣಾಭಾವು ಸಾಠೆ. ಬುದ್ಧ, ಬಸವ, ಅಂಬೇಡ್ಕರ್, ಅಣ್ಣಾಭಾವು ಸಾಠೆ ಇವರೆಲ್ಲ ಪಂಥಗಳಾಚೆ ಬೆಳೆದವರು. ಇಡೀ ರಾಜ್ಯಕ್ಕೆ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು. ಇಲ್ಲಿಯ ಸಾಂಸ್ಕೃತಿಕ ನಾಯಕರ ಜೀವನ ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕೆಂದು ಹೂಗಾರ ಕರೆ ನೀಡಿದರು. ಸಂವಿಧಾನವನ್ನು ಈ ಅಣ್ಣಾಭಾವು ಸಾಠೆ ಲೋಕಮಂಚ್ ಟ್ರಸ್ಟ್ ಮನೋಹರ ಮಾಳಗೆ ನೇತೃತ್ವದಲ್ಲಿ ಮನೆಮನೆಗೆ ಪಸರಿಸುತ್ತಿರುವುದು ಬಣ್ಣಿಸಲಸಾಧ್ಯವಾದುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಮನೋಹರ ಮಾಳಗೆ ಮಾತನಾಡಿ ನಮ್ಮ ಅಣ್ಣಾಭಾವು ಸಾಠೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಮಂಚ್ ಟ್ರಸ್ಟ್ ಸಂವಿಧಾನ ಮತ್ತು ಸಾಠೆಯವರ ಸಾಹಿತ್ಯ ಸಂಶೋಧನೆಯನ್ನು ಮನೆಮನಗಳ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಕೇವಲ ಒಂದೂವರೆ ದಿವಸ ಶಾಲೆಗೆ ಹೋಗಿ ನೂರಕ್ಕೂ ಅಧಿಕ ಸಾಹಿತ್ಯ ಕೃತಿ ರಚಿಸಿದ ಕೀರ್ತಿ ಅಣ್ಣಾಭಾವು ಸಾಠೆಯವರಿಗೆ ಸಲ್ಲುತ್ತದೆ. ಸಾಠೆಯವರ ಸಾಹಿತ್ಯ ಮನುಕುಲಕ್ಕೆ ದಾರಿದೀಪವಾಗಿವೆ. ಶೋಷಿತ ಸಮುದಾಯದಲ್ಲಿ ಹುಟ್ಟಿ ಉನ್ನತ ಮಟ್ಟಕ್ಕೆ ಬೆಳೆದ ಸಾಠೆಯವರು ಜನಮನ ಪರಿವರ್ತನೆ ಮಾಡಿದ್ದಾರೆ. ಒಮ್ಮೆ ಮರಾಠಿಯಿಂದ ಕನ್ನಡಕ್ಕೆ ತರ್ಜುಮೆಗೊಂಡ ಸಾಠೆಯವರ ಪುಸ್ತಕ ಓದಿ ಈ ಟ್ರಸ್ಟ್ ಸ್ಥಾಪನೆ ಮಾಡಿದ್ದೇನೆ ಎಂದರು.
ಕರ್ನಾಟಕ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ ಮೈಸೂರ ಭಾಗದವರು ಕೇವಲ ಮೂರು ಹಾಡುಗಳನ್ನು ಹಾಡಿ ರಾಜ್ಯಮಟ್ಟದ ಕಲಾವಿದರೆನಿಸಿಕೊಳ್ಳುತ್ತಾರೆ. ಆದರೆ ಬೀದರ ಕಲಾವಿದರು ಸಾವಿರ ಹಾಡುಗಳನ್ನು ಹಾಡಿದರೂ ಪ್ರಚಾರ ಪಡೆದುಕೊಳ್ಳುವುದಿಲ್ಲ. ಸರಿಯಾದ ವೇಷಭೂಷಣ ಮತ್ತು ತಂಡ ಕಟ್ಟಿಕೊಂಡರೆ ಬೀದರ ಕಲಾವಿದರಿಗೆ ರಾಜ್ಯಮಟ್ಟದಲ್ಲಿ ಮನ್ನಣೆ ಸಿಗುತ್ತದೆ. ಕಲಾವಿದರು ಪ್ರಯತ್ನಶೀಲರಾಗಬೇಕೆಂದು ಕರೆ ನೀಡಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿದರು. ವೇದಿಕೆ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ಉಪಸ್ಥಿತರಿದ್ದರು. ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಿಪ್ಸನ್ ಕೋಟೆ ನಾಡಗೀತೆ ನೆರವೇರಿಸಿದರು. ಪ್ರವೀಣಚಂದ್ರ ಸ್ವಾಗತಿಸಿದರು. ಪ್ರೇಮ ಅವಿನಾಶ ನಿರೂಪಿಸಿದರು. ಮನೋಹರ ಮಿರ್ಜಾಪುರಕರ್ ವಂದಿಸಿದರು.
ಕವಿಗೋಷ್ಠಿ: ಭಾರತದ ಸಂವಿಧಾನದ ಕುರಿತು ಕವಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಪ್ರಾಚಾರ್ಯ ಪೆÇ್ರ. ದೇವಿದಾಸ್ ತುಮಕುಂಟೆ ಉದ್ಘಾಟಿಸಿದರು. ವೇದಿಕೆ ಮೇಲೆ ಸಾಹಿತಿ ರಜಿಯಾ ಬಳಬಟ್ಟಿ ಹಾಗೂ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಉಪಸ್ಥಿತರಿದ್ದರು. ಕವಿಗಳಾದ ಸುನಿತಾ ಬಿರಾದಾರ, ಬುದ್ದಾದೇವಿ ಸಂಗಮಕರ್, ಸಿದ್ದಮ್ಮ ಬಸಣ್ಣೋರ್, ಅಜೀತ್ ನೇಳಗಿ, ವಿಶ್ವಜೀತ್ ದಂಡಿನ್ ಸೇರಿದಂತೆ ಹಲವು ಕವಿಗಳು ಕವನ ವಾಚನ ಮಾಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕುರಿತು ಮಾರ್ಮಿಕವಾಗಿ ಕವನ ವಾಚನ ಮಾಡಿದರು. ಸಂವಿಧಾನದ ಮಹತ್ವದ ಮೇಲೆ ಬೆಳಕು ಚೆಲ್ಲಿದರು.