ಚರಂಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ
ಕುಣಿಗಲ್, ಆ. ೨೫- ಪಟ್ಟಣದ ದೊಡ್ಡಪೇಟೆ ರಸ್ತೆ ಬದಿಯ ಎರಡು ಕಡೆ ಚರಂಡಿ ನಿರ್ಮಾಣಕ್ಕೆ ಪುರಸಭಾ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ಪಟ್ಟಣದ ದೊಡ್ಡಪೇಟೆ ರಸ್ತೆಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ನಂತರ ಚರಂಡಿ ನಿರ್ಮಾಣ ಕಾರ್ಯವು ಮಾಡದಿದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿತ್ತು. ಹಿಂದೆ ಈ ರಸ್ತೆಯನ್ನು ರಾಜಬೀದಿ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಇಲ್ಲಿನ ರಸ್ತೆಯಲ್ಲಿ ಸಾಗುವ ಮಕ್ಕಳು, ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ದ್ವಿಚಕ್ರ ವಾಹನ ನಿಲ್ಲಿಸಲು ತೊಂದರೆ ಉಂಟಾಗುತ್ತಿತ್ತು.
ಜತೆಗೆ ಕೆಲವೊಮ್ಮೆ ಸಾರ್ವಜನಿಕರಿಗೂ ಓಡಾಡಲು ಕಿರಿಕಿರಿಯಾಗುತ್ತದೆ ಎಂದು ಸಾರ್ವಜನಿಕರು ಹಲವು ಬಾರಿ ದೂರಿದರೂ ಸ್ಥಳೀಯರ ವಿರೋಧವಿದ್ದರಿಂದ ಪುರಸಭೆ ಸರಿಯಾದ ಕ್ರಮ ಕೈಗೊಂಡಿರಲಿಲ್ಲ.
ಆದರೆ ಇದೀಗ ಪುರಸಭೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದು ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂಜಿನಿಯರ್ ಬಿಂದುಸಾರ ಪ್ರತಿಕ್ರಿಯಿಸಿ, ರಸ್ತೆಯ ಎರಡು ಬದಿ ಚರಂಡಿಗಳ ಅತಿಕ್ರಮಣವಾಗಿದೆ. ಈಗ ಎರಡು ಬದಿಯಲ್ಲೂ (೧೩೯+೧೪೦) ಒಟ್ಟು ೨೭೦ ಮಿ.ಚರಂಡಿ ನಿರ್ಮಾಣದ ನಂತರ ಎರಡು ಬದಿಗೂ ಫೇವರ್ ಬ್ಲಾಕ್ ಸ್ಲ್ಯಾಬ್ ಅಳವಡಿಸಲಾಗುತ್ತದೆ. ಇದರಿಂದ ಸುಗಮವಾದ ರಸ್ತೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಈಗ ರಸ್ತೆ ಬದಿಯ ಚರಂಡಿಯಾಗುತ್ತಿರುವುದು ಒಳ್ಳೆಯದು, ಹಿಂದೆ ಹಲವು ಬಾರಿ ಕಾಮಗಾರಿ ನೆಪದಲ್ಲಿ ಮಾಡದೆ ಅಗೆದು ಬಿಡುತ್ತಿದ್ದರು. ಸದ್ಯ ಈಗ ಚರಂಡಿ, ಕಾಮಗಾರಿ ಚಾಲನೆಗೊಂಡಿರುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಇಲ್ಲಿನ ವ್ಯಾಪಾರಸ್ಥರು ಹೇಳಿದ್ದಾರೆ.