ತೆಂಗಿಗೆ ಕೆಂಪುಮೂತಿ ಹುಳು ಬಾಧೆ : ಹತೋಟಿ ಕ್ರಮ
ತುಮಕೂರು, ಆ. ೨೫- ಜಿಲ್ಲೆಯ ವಿವಿಧ ಭಾಗಗಳಲ್ಲಿ ತೆಂಗು ಬೆಳೆಯಲ್ಲಿ ಕೆಂಪು ಮೂತಿ ಹುಳು ಬಾಧೆಯು ಹೆಚ್ಚಾಗಿರುವುದರಿಂದ ಸಮಗ್ರವಾಗಿ ಹತೋಟಿ ಮಾಡುವ ಕ್ರಮಗಳ ಕುರಿತು ಜಿಲ್ಲಾ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆ ನೀಡಿದೆ.
ಕೆಂಪುಮೂತಿ ಕೀಟವು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ತೆಂಗಿನ ಮರವನ್ನು ಅವಲಂಬಿಸಿ ಎಲ್ಲಾ ಹಂತದಲ್ಲೂ ತೆಂಗಿಗೆ ಹಾನಿ ಉಂಟು ಮಾಡುತ್ತದೆ. ಕೆಂಪುಮೂತಿ ಹುಳುಗಳು ತೆಂಗಿನ ಮರದ ಕಾಂಡದೊಳಗೆ ಸೇರಿಕೊಂಡು ಮೃದು ಭಾಗಗಳನ್ನು ಕೊರೆಯುವುದರಿಂದ ಪ್ರಾರಂಭದಲ್ಲಿ ಸಣ್ಣ ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತದೆ.
ಕೀಟ ಬಾಧೆಗೆ ಒಳಗಾದ ರಂಧ್ರಗಳಿಂದ ಕಂದು ಬಣ್ಣದ ರಸ ಸೋರಿರುವುದು ಹಾಗೂ ಹುಳುಗಳು ತಿಂದು ಹಾಕಿದ ನಾರು ಹೊರಬಂದಿರುವುದನ್ನು ಕಾಣಬಹುದು. ಕೀಟ ಬಾಧೆಯು ತೀವ್ರವಾದಾಗ ಸುಳಿ ಗರಿಗಳು ಒಣಗಿ, ಹಾನಿಗೊಳಗಾದ ಭಾಗಗಳ ಹತ್ತಿರ ಎಲೆಯ ತೊಟ್ಟುಗಳು (ಎಡಮಟ್ಟೆ) ಸೀಳುತ್ತವೆ. ಕೆಂಪು ಮೂತಿ ಹುಳುವಿನ ಬಾಧೆಯನ್ನು ಖಚಿತಪಡಿಸಿಕೊಳ್ಳಲು ನಿಶ್ಯಬ್ದ ಸಮಯದಲ್ಲಿ ತೆಂಗಿನ ಮರದ ಕಾಂಡಕ್ಕೆ ಕಿವಿಯನ್ನಿಟ್ಟು ಆಲಿಸಿದಾಗ, ಹುಳುಗಳು ತಿನ್ನುತ್ತಿರುವ ಶಬ್ದವನ್ನು ಕೇಳಿಸಿಕೊಳ್ಳಬಹುದು.
ಕೆಂಪು ಮೂತಿ ಹುಳುವು ಎಳೆಯ ವಯಸ್ಸಿನ ತೆಂಗಿನ ಮರಗಳಿಗೆ ಹೆಚ್ಚು ಹಾನಿಕಾರಕ ಕೀಟವಾಗಿದ್ದು, ಸಾಮಾನ್ಯವಾಗಿ ೫ ರಿಂದ ೨೦ ವ? ವಯಸ್ಸಿನ ಮರಗಳು ಇದರ ಹಾವಳಿಗೆ ತುತ್ತಾಗುತ್ತವೆ.
ನಿರ್ವಹಣೆ
ಮರದ ಯಾವುದೇ ಗರಿಗಳನ್ನು ಕತ್ತರಿಸುವಾಗ ಕಾಂಡದಿಂದ ೧ ಮೀ. ಉದ್ದ ಬಿಟ್ಟು ಉಳಿದ ಭಾಗ ಕತ್ತರಿಸಿ, ಮೃದುವಾದ ಅಂಗಾಂಶಗಳಿಗೆ ಗಾಯವಾಗದಂತೆ ನೋಡಿಕೊಳ್ಳಬೇಕು ಮತ್ತು ತೋಟದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಕೀಟ ಬಾಧೆಯು ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದನ್ನು ನಿವಾರಿಸಲು ಬಾಧೆಗೊಳಗಾದ ಮರಗಳನ್ನು ಕತ್ತರಿಸಿ, ಅವುಗಳನ್ನು ಸುಟ್ಟು ಹಾಕಬೇಕು. ಕೆಂಪುಮೂತಿ ಹುಳುಗಳನ್ನು ಆಕರ್ಷಿಸಲು ಎಕರೆಗೆ ೧ ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು ಹಾಗೂ ಈ ಮೋಹಕ ಬಲೆಗಳನ್ನು ಯಾವುದೇ ಕಾರಣಕ್ಕೂ ತೆಂಗಿನ ಮರಕ್ಕೆ ಕಟ್ಟಬಾರದು.
ದೂರದ ಮೈದಾನದಲ್ಲಿ ಮೋಹಕ ಬಲೆಗಳನ್ನು ಕಟ್ಟುವುದರಿಂದ ಹುಳುಗಳನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿಡಬಹುದು. (ಭೂಮಿಯಿಂದ ೧.೨ -೨ ಮೀ. ಎತ್ತರದವರೆಗೆ), ಸ್ಪೈನೋಸ್ಯಾಡ್-೨.೫ ಎಸ್.ಸಿ. ಪ್ರತಿ ಲೀ. ನೀರಿಗೆ ೫ ಮಿ.ಲೀ. ನಂತೆ, ಇಮಿಡಾಕ್ಲೋರೊಫಿಡ್ ೩೦.೫ ಎಸ್.ಎಲ್, ಪ್ರತಿ ಲೀ. ನೀರಿಗೆ ೧ ಮಿ.ಲೀ. ನಂತೆ ಬಾಧಿತ ಮರದ ಕಾಂಡದ ಎತ್ತರದಲ್ಲಿರುವ ರಂಧ್ರದಿಂದ ಸುರಿದು ಕಾಂಡದಲ್ಲಿ ಸೇರಿಸುವುದರಿಂದ ಕೀಟವನ್ನು ಹತೋಟಿಯಲ್ಲಿಡಬಹುದು. ತೆಂಗಿನ ತೋಟದಲ್ಲಿ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಈ ಕೀಟದ ಹಾವಳಿಯನ್ನು ಕಡಿಮೆ ಮಾಡಬಹುದಾಗಿದೆ.
ಪ್ರೋತ್ಸಾಹ ಧನ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೆಂಗು ಬೆಳೆಯಲ್ಲಿ ಕೆಂಪುಮೂತಿ ಹುಳುವನ್ನು ತಡೆಗಟ್ಟಲು ಮೋಹಕ ಬಲೆಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುವುದು. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ ಮನವಿ ಮಾಡಿದ್ದಾರೆ.