ವರುಣಾರ್ಭಟ: ಮನೆಗಳಿಗೆ ಹಾನಿ
ಗುಬ್ಬಿ, ಆ. ೨೫- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಬ್ಬಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಸದ ಮನೆಗಳಿಗೆ ಹಾನಿಯಾಗಿದೆ.
ತಾಲ್ಲೂಕಿನ ನಿಟ್ಟೂರು ಹೋಬಳಿಯ ತ್ಯಾಗಟೂರು ಪಂಚಾಯತಿ ವ್ಯಾಪ್ತಿಯ ಆದಲಗೆರೆ, ತ್ಯಾಗಟೂರು, ಸಾಗರನಹಳ್ಳಿ ಗೊಲ್ಲರಟ್ಟಿಯ ಗ್ರಾಮಗಳಲ್ಲಿ ಮಳೆಯಿಂದ ವಾಸದ ಮನೆಗಳು ಕುಸಿದು ಬಿದ್ದು ಸಂತ್ರಸ್ತರು ಬೀದಿ ಪಾಲಾಗಿದ್ದಾರೆ.
ಅದಲಗೆರೆ ಗ್ರಾಮದ ವಾಸಿಯಾದ ಜಯಮ್ಮ ಅವರ ಮನೆ ಸಂಪೂರ್ಣ ಹಾಳಾಗಿದ್ದು, ಇನ್ನೂ ಕುಸಿಯುವ ಹಂತದಲ್ಲಿದೆ. ಇವರ ಗಂಡ ತ್ಯಾಗಟೂರು ಪಂಚಾಯಿತಿಯಲ್ಲಿ ವಾಟರ್ ಮನ್ ಆಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಅಲ್ಲದೆ ಒಂದು ವರ್ಷದ ಹಿಂದೆ ಅವರ ಯಜಮಾನರು ಮರಣ ಹೊಂದಿದ್ದಾರೆ.
ಇವರಿಗೆ ಸರ್ಕಾರದಿಂದ ಅಥವಾ ಗ್ರಾಮ ಪಂಚಾಯಿತಿಯಿಂದ ಯಾವುದೇ ಹಣಕಾಸಿನ ನೆರವು ನೀಡಿಲ್ಲ. ಈ ಮಹಿಳೆಗೆ ೪ ಜನ ಗಂಡು ಮಕ್ಕಳಿದ್ದು ಅವರೆಲ್ಲರೂ ಬೇರೆ ವಾಸವಾಗಿದ್ದಾರೆ. ಆದ್ದರಿಂದ ನನಗೆ ವಾಸವಿದ್ದ ಮನೆ ಕೂಡ ಬಿದ್ದು ಹೋಗಿರುವುದರಿಂದ ನಾನು ವಾಸಿಸಲು ಮನೆ ಇಲ್ಲ. ನನಗೆ ವಾಸ ಮಾಡಲು ಒಂದು ಸೂರು ಕಟ್ಟಿಸಿ ಕೊಡಬೇಕೆಂದು ಜಯಮ್ಮನವರು ತಮ್ಮ ಅಳಲು ತೋಡಿಕೊಂಡಿದ್ದಾರೆ.