ಮನದ ಮೈಲಿಗೆ ಕಳೆದ ಮಡಿವಾಳ ಮಾಚಿದೇವರು
ಕಲಬುರಗಿ:ಆ.25: ಬಸವಣ್ಣನವರ ಹಿರಿಯ ಸಮಕಾಲೀನರಾದ ಮಡಿವಾಳ ಮಾಚಿದೇವರು ಕೇವಲ ಬಟ್ಟೆಗಂಟಿದ ಕೊಳೆ ಮಾತ್ರ ತೊಳೆಯಲಿಲ್ಲ. ಮನಕ್ಕೆ ಅಂಟಿದ ಮೈಲಿಗೆ ಕೂಡ ತೊಳೆದು ಒಳಗೂ ಹೊರಗೂ ಒಂದಾಗಿಸುವ ನಿರಂಜನ, ವೀರವ್ರತಿ, ಗಣಾಚಾರಿ ಶರಣರಾಗಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಶನಿವಾರ ಮಹಾತ್ಮ ಬಸವೇಶ್ವರ ನಗರದ ಜಗನ್ನಾಥ ರಾಚಟ್ಟೆಯವರ ಶರಣ ಸಂಕುಲ ಸಭಾಂಗಣದಲ್ಲಿ ಜರುಗಿದ ವಚನ ವೈಭವ ಕಾರ್ಯಕ್ರಮದಲ್ಲಿ ‘ವೀರಗಣಾಚಾರಿ ಮಾಚಿದೇವರು’ ಕುರಿತು ವಿಶೇಷ ಅನುಭಾವ ನೀಡಿದ ಅವರು, ಅಲ್ಲಮಪ್ರಭು, ಬಸವಣ್ಣನವರಿಗಿಂತ ಹೆಚ್ಚು ಕಾಲ ಬದುಕಿದ್ದ ಮಡಿವಾಳ ಮಾಚಿದೇವರು ಬರೆದ 300 ವಚನಗಳು ಲಭ್ಯವಿದ್ದು, ಅವರ ವಚನಗಳು ವೈಚಾರಿಕ,ವೈಜ್ಞಾನಿಕ ವಿಚಾರಗಳಿಂದ ಕೂಡಿವೆ ಎಂದರು.
ಬಸವಣ್ಣ ಮತ್ತು ಮಾಚಿದೇವರರಿಗೆ ಅವಿನಾಭಾವ ಸಂಬಂಧವಿತ್ತು. ಒಬ್ಬರದು ಮುಗಿದ ಕೈ ಬಾಗಿದ ತಲೆ. ಇನ್ನೊಬ್ಬರದು ವೀರಗಂಟೆಯ ಎಚ್ಚರಿಕೆ. ಮಡಿವಾಳ ಮಾಚಿದೇವರು ಬಸವಣ್ಣನವರಿಗೆ ಸಾರ್ವಜನಿಕ ಕೆಲಸಗಳಿಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಆದರೂ “ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ” ಎಂದು ಬಸವಣ್ಣನವರು ಕೊಂಡಾಡಿದ್ದಾರೆ ಎಂದು ಮಡಿವಾಳ ಮಾಚಿದೇವರ ಬದುಕು ಹಾಗೂ ಬೋಧನೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಸಮಾನತೆ, ಸೌಹಾರ್ದತೆ, ಸ್ವಾವಲಂಬಿ ವಿಚಾರಗಳನ್ನೊಳಗೊಂಡ ವಚನ ಸಾಹಿತ್ಯವು ನಮ್ಮ ನೆಲೆದ ಮೊಟ್ಟ ಮೊದಲ ವಿಚಾರ ಸಾಹಿತ್ಯ.ವಾಗಿದೆ. ಇಂತಹ ವಿಚಾರಗಳು ಸಮಾಜದಲ್ಲಿ ನೆಲೆಗೊಂಡರೆ ಸಮಾಜ ಜಾಗೃತಿ ಉಂಟಾಗಿ ಸಾಮಾಜಿಕ ಪರಿವರ್ತನೆಯಾಗುತ್ತದೆ ಎಂಬುದನ್ನು ಅರಿತ ವೈದಿಕರು ಅನೇಕ ಹುನ್ನಾರಗಳನ್ನು ಹೆಣೆಯುತ್ತಲೇ ಇದ್ದಾರೆ. ಇದಕ್ಕೆ ಬಲಿಯಾಗದೆ ಬದುಕಿನಲ್ಲಿ ವೈಚಾರಿಕ ಶಿಸ್ತು ಬೆಳೆಎಸಿಕೊಳ್ಳಬೇಕು.
-ಅಲ್ಲಮಪ್ರಭು ಬೆಟ್ಟದೂರು, ಸಾಹಿತಿಗಳು