ಕಾಂಗ್ರೆಸ್ ತೆಕ್ಕೆಗೆ ಪುರಸಭೆ ಆಡಳಿತ
ಮಾಲೂರು ಆ೨೫: ಪುರಸಭೆ ೨ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರುಗಳ ಸ್ಥಾನಗಳಿಗೆ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆ ಕೋಮಲ ಕೋಳಿ ನಾರಾಯಣ ೧೯ ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಬಿ ಜೆ ಪಿ ಬಂಡಾಯ ಸದಸ್ಯೆ ವಿಜಯಲಕ್ಷ್ಮಿ ಕೃಷ್ಣಪ್ಪ ಅವರು ೧೯ ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪುರಸಭೆಯ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಮರಳಿದೆ.
ಕಳೆದ ಒಂದು ವರ್ಷದಿಂದ ಖಾಲಿಯಾಗಿದ್ದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಸುಪ್ರೀಂ ಕೋರ್ಟ್ ಚುನಾವಣೆ ನಡೆಸಲು ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮೀಸಲಾತಿಯನ್ನು ಪ್ರಕಟಿಸಿ ಮಾಲೂರು ಪುರಸಭೆಯಲ್ಲಿ ಸಾಮಾನ್ಯ ಮಹಿಳೆ ಅಧ್ಯಕ್ಷರು, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷರು ನಿಗದಿಪಡಿಸಿತ್ತು.ಶುಕ್ರವಾರ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಅಧಿಕಾರಿ ತಹಶೀಲ್ದಾರ್ ಕೆ.ರಮೇಶ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು.
ಶಾಸಕರು ಸಂಸದರು ಸೇರಿದಂತೆ ಒಟ್ಟು ೨೯ ಸದಸ್ಯರ ಪೈಕಿ ಒಬ್ಬ ಪಕ್ಷೇತರ ಸದಸ್ಯ ಬಾನುತೇಜ ತಟಸ್ಥವಾಗಿ ಮತ ಹಾಕದೆ ಉಳಿದರು, ಶಾಸಕರು ಸೇರಿದಂತೆ ಒಟ್ಟು ೨೭ ಮತಗಳು ಚಲಾವಣೆಗೊಂಡವು, ಸಂಸದರು ಸೇರಿದಂತೆ ಇಬ್ಬರು ಸದಸ್ಯರು ಚುನಾವಣಾ ಸಭೆಗೆ ಗೈರು ಹಾಜರಾಗಿದ್ದರು.ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ್ದ ರಾಘವೇಂದ್ರ ಅವರು ಸಭೆಗೆ ಗೈರು ಹಾಜರಾಗಿದ್ದಾರು. ಚುನಾವಣಾ ಸಭೆಗೆ ಹಾಜರಾಗಿದ್ದ ಬಿಜೆಪಿ ಸದಸ್ಯರು ಎಂ ಸಿ ಮುನಿರಾಜು ಹಾಗೂ ಸುಮಿತ್ರ ಪಚ್ಚಪ್ಪ, ಹೂಡಿ ವಿಜಯಕುಮಾರ್ ಸ್ವಾಭಿಮಾನಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಮಂಜುಳ ಅವರು ಕಾಂಗ್ರೆಸ್ ಪರ ಮತ ಚಲಾವಣೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾದ ಹಿನ್ನೆಲೆಯಲ್ಲಿ ಪುರಸಭೆ ಮುಂಭಾಗ ಪಟಾಕಿ ಸೇರಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಶಾಸಕ ಕೆ.ವೈ.ನಂಜೇಗೌಡ ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ನಮ್ಮ ಪಕ್ಷದಲ್ಲಿ ಗುರ್ತಿಸಿಕೊಂಡಿರುವ ಸದಸ್ಯರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನಡೆದುಕೊಳ್ಳುವುದಾಗಿ ಹೇಳಿದರು.
ಮಾಜಿ ಶಾಸಕ ಎ.ನಾಗರಾಜು ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಪುರಸಭೆಯ ಇತಿಹಾಸದಲ್ಲಿ ಇದುವರೆಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ವಿರೋಧ ಪಕ್ಷದವರು ಮತಗಳು ಇನ್ನೊಂದು ಪಕ್ಷಕ್ಕೆ ಬಂದಿರಲಿಲ್ಲ ವಿರೋಧ ಪಕ್ಷದವರ ಮತಗಳು ಬಂದಿರುವುದು ವಿಶೇಷ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಶಾಸಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಪಟ್ಟಣದ ಜನತೆಗೆ ಮೂಲಭೂತ ಸವಲತ್ತುಗಳನ್ನು ಒದಗಿಸಿ ಅಭಿವೃದ್ಧಿ ಮಾಡುವುದರ ಮೂಲಕ ಆಡಳಿತವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಅಪರ ಪೋಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿ.ವೈ.ಎಸ್‌ಪಿ ನಾಕ್ತೇ, ಇನ್ಸ್‌ಪೆಕ್ಟರ್ ವಸಂತ್ ಅವರ ನೇತೃತ್ವದಲ್ಲಿ ಪುರಸಭೆಯ ಮುಂಭಾಗದ ರಸ್ತೆಯನ್ನು ಬಂದ್ ಮಾಡಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಜಿ ಮಧುಸೂದನ್, ಎಚ್.ಎಂ.ವಿಜಯ ನರಸಿಂಹ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಂ ಉಲ್ಲಾ ಖಾನ್, ಪುರಸಭಾ ಸದಸ್ಯರಾದ ಆರ್ ವೆಂಕಟೇಶ್, ಎ ರಾಜಪ್ಪ, ಮುರಳಿಧರ್, ವಿಜಯಲಕ್ಷ್ಮಿ, ಇಂತಿಯಾಜ್ ಖಾನ್, ಜಾಕೀರ್ ಖಾನ್, ಪದ್ಮಾವತಿ, ಹೇಮಾ, ಚೈತ್ರ, ಪ್ರಭಾರ ಮುಖ್ಯ ಅಧಿಕಾರಿ ಸತ್ಯನಾರಾಯಣ, ದರಕಾಸ್ತು ಸಮಿತಿ ಅಧ್ಯಕ್ಷ ಆನೆಪುರ ಹನುಮಂತಪ್ಪ, ಸದಸ್ಯರಾದ ಸತೀಶ್, ನವೀನ್, ಯೋಜನಾ ಪ್ರಾಧಿಕಾರ ಸದಸ್ಯರಾದ ನಾಗರಾಜ್, ಮಂಜುನಾಥ್ ರೆಡ್ಡಿ, ಚಿರಂಜೀವಿ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್ ರೆಡ್ಡಿ, ಕೊಳಿನಾರಾಯಣ್, ಕೃಷ್ಣಪ್ಪ, ಕಿರಣ್ ಸೊಮಣ್ಣ, ನವೀನ್, ಇನ್ನಿತರರು ರಾಜರಿದ್ದರು.