ಕವಲೆತ್ತು: ಶ್ರೀ ಮಾರ್ಗದ ದುರುಗಮ್ಮದೇವಿಗೆ ಶ್ರಾವಣಮಾಸದ ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಹರಿಹರ.ಆ.೨೪; ಇಲ್ಲಿಗೆ ಸಮೀಪದ ಕವಲೆತ್ತು ಗ್ರಾಮದ ಆರಾಧ್ಯ ದೈವವಾದ ಶ್ರೀ ಮಾರ್ಗದ ದುರುಗಮ್ಮ ದೇವಿಗೆ ಶ್ರಾವಣ ಮಾಸದ ೩ನೇ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.ಶ್ರೀ ಮಾರ್ಗದ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಾಲಕ್ಕಿಯಲ್ಲಿರಿಸಿಕೊಂಡು ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಹತ್ತಿರದ ತುಂಗಭದ್ರಾ ನದಿಗೆ ತೆರಳಿ, ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಯನ್ನು ರಾಜಬೀದಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಬೆಳಗ್ಗೆ ದೇವಸ್ಥಾನದ ಮಾರ್ಗದ ದುರ್ಗಮ್ಮ ದೇವಿಗೆ ಪಂಚಾಮೃತ ಅಭಿಷೇಕ ಕುಂಕುಮಾರ್ಚನೆ ನೆರವೇರಿ ಸಲಾಯಿತು.ದೇವಿಗೆ ಬಂಗಾರ ಹಾಗೂ ಬೆಳ್ಳಿ ಆಭರಣ ಕವಚಗಳನ್ನು ಧರಿಸಿ, ವಿವಿಧ ಹೂಗಳಿಂದ ಅಲಂಕರಿಸಿದ್ದರು. ದೇವಸ್ಥಾನಕ್ಕೆ ವಿದ್ಯುತ್ ದೀಪಗಳ ಹಾಗೂ ಹೂಗಳಿಂದ ಅಲಂಕಾರ ಮಾಡಲಾಗಿದೆ  ಎಂದು ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.ದಾವಣಗೆರೆ, ಹಾವೇರಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು, ಹೂವು-ಹಣ್ಣು-ಕಾಯಿ ಅರ್ಪಿಸಿ, ಹರಕೆಗಳನ್ನು ತೀರಿಸಿ, ತಮ್ಮ ಭಕ್ತಿಯನ್ನು ಮೆರೆದರು.