ಗಡಿಭಾಗದ ಕನ್ನಡದ ಸಮಸ್ಯೆ ಆತಂಕ ತಂದಿದೆ.
ಸಂಜೆವಾಣಿ ವಾರ್ತೆ
ಚಿತ್ರದುರ್ಗಾ.೨೫: ಗಡಿಭಾಗದ ಕನ್ನಡದ ಸಮಸ್ಯೆ ಆತಂಕ ತಂದಿದೆ. ಗಡಿಪ್ರದೇಶಗಳಲ್ಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕನ್ನಡನೆಲ, ಜಲ, ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಸರ್ಕಾರವು ಹಮ್ಮಿಕೊಳ್ಳುವ ಕನ್ನಡಪರ ಯೋಜನೆಗಳಿಂದಾಗಿ ಕನ್ನಡನಾಡು ಸಮೃದ್ಧವಾಗಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಹಸಿರು ನೆಮ್ಮದಿಯ ತಾಣವಾದರೆ, ಕನ್ನಡಭಾಷೆ ನಮ್ಮೆಲ್ಲರ ಉಸಿರಾಗಬೇಕು. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಕನ್ನಡ ನೆಲದ ಭಾಷೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಷಯಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಅತ್ಯಂತ ಶ್ರೀಮಂತವಾಗಿರುವ ಕನ್ನಡನಾಡಿನಲ್ಲಿ ನೆಲೆಸಿರುವ ನಾವೆಲ್ಲರೂ ಧನ್ಯರು ಎಂದು ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ಆಗಸ್ಟ್ ೨೪ ರಂದು ಶನಿವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ಹಿರೇಗುಂಟನೂರು ಗ್ರಾಮದಲ್ಲಿರುವ ತರಳಬಾಳು ವಿದ್ಯಾಸಂಸ್ಥೆಯ ಶ್ರೀ ದ್ಯಾಮಲಾಂಬ ಪ್ರೌಢಶಾಲಾ ಆವರಣದಲ್ಲಿ ನಗರದ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಭ್ರಮ-೫೦, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯವಾಕ್ಯದೊಂದಿಗೆ ನಾಡಗೀತೆ, ರಾಷ್ಟçಗೀತೆ, ರೈತಗೀತೆ ಪ್ರಾಯೋಗಿಕ ಗಾಯನ ತರಬೇತಿ, ಕನ್ನಡ ಗೀತಗಾಯನ, ಕವಿಕಾವ್ಯ ಪರಿಚಯ ಹಾಗೂ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.