ಓಬಣ್ಣನಹಳ್ಳಿ: ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ಭರವಸೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ ಆ. ೨೫; ಕಳೆದ ವಾರ ಸುರಿದ ಹೆಚ್ಚಿನ ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲ್ಲೂಕಿನ ಓಬಣ್ಣನಹಳ್ಳಿ ಗ್ರಾಮಕ್ಕೆ ಸಂಸದ ಗೋವಿಂದ ಎಂ ಕಾರಜೋಳ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಂತ್ರಸ್ಥರ ಅಹವಾಲು ಆಲಿಸಿದರು.ತೀವ್ರ ಮಳೆಯಿಂದಾಗಿ ಓಬಣ್ಣನಹಳ್ಳಿ ಗ್ರಾಮದ ಬಹುತೇಕ ಮನೆಗಳು ಹಾನಿಯಾಗಿರುವುದನ್ನು ಕಂಡು ಮರುಕ ವ್ಯಕ್ತಪಡಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಎಂ.ಕಾರಜೋಳ ಅವರು, ಓಬಣ್ಣನಹಳ್ಳಿ ಸುತ್ತಮುತ್ತ ಬೆಟ್ಟ ಇದೆ.  ಹೀಗಾಗಿ ಹೆಚ್ಚಿನ ಮಳೆಯಿಂದಾಗಿ, ಬೆಟ್ಟದಿಂದ ಮಳೆನೀರು ಹರಿದು ಇಡೀ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಅನೇಕ ಮನೆಗಳು ಹಾನಿಗೀಡಾಗಿವೆ. ಮಳೆ ನೀರು ನುಗ್ಗಿದ್ದರಿಂದ ಮನೆಯ ಸಾಮಾಗ್ರಿಗಳು ಹಾನಿಯಾಗಿವೆ. ಈಗಾಗಲೇ ತಹಶೀಲ್ದಾರ್ ಅವರು ಹಾನಿಯಾದ ಮನೆಗಳಿಗೆ ₹ 5 ಸಾವಿರ ತುರ್ತು ಪರಿಹಾರ ನೀಡಿದ್ದಾರೆ ಎಂದು ತಿಳಿಸಿದ ಅವರು, ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳು, ಗುಡಿಸಲುಗಳನ್ನು ಪಟ್ಟಿ ಮಾಡಿ ಮನೆ ನಿರ್ಮಾಣಕ್ಕೆ ಕ್ರಮಕ್ಕೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಮಾಡಿದರು.