ಟೇಕ್ವಾಂಡೋ ಗರ್ಲ್ ಚಲನಚಿತ್ರ ಆ.೩೦ ಕ್ಕೆ ಬಿಡುಗಡೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೫; ಆತ್ರೇಯ ಕ್ರಿಯೇಶನ್ಸ್ ನಿರ್ಮಾಣದ ಡಾ. ಸುಮಿತ ಪ್ರವೀಣ್ ನಿರ್ಮಿಸಿರುವ ಟೇಕ್ವಾಂಡೋ ಗರ್ಲ್ ಚಿತ್ರಕ್ಕೆ ರವೀಂದ್ರ ವೆಂಶಿರವರ ನಿರ್ದೇಶನವಿದ್ದು ಕನ್ನಡ ಚಿತ್ರರಂಗದ ಟೇಕ್ವಾಂಡೋ ಗರ್ಲ್ ಆಗಿ ಋತುಸ್ಪರ್ಶ ಪ್ರಪ್ರಥಮ ಬಾರಿಗೆ ಮುಖ್ಯ ಪಾತ್ರದಲ್ಲಿ ನಾಯಕನಟಿಯಾಗಿ ಅಭಿನಯಿಸಿದ್ದಾರೆ.ಈ‌  ಚಿತ್ರ‌ ಆ.೩೦ ರಂದು‌ ರಲ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ‌ ರವೀಂದ್ರ ವೆಂಶಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಈ ಚಿತ್ರದಲ್ಲಿ ಹೆಣ್ಣು ಮಕ್ಕಳು ತಮಗೆ ತಾವೇ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಮಹತ್ತರ ಸಂದೇಶವಿದ್ದು ಸುಮಾರು ೨೦೦ ಮಕ್ಕಳಿಗೆ ಅವಕಾಶ ಕಲ್ಪಿಸಿ ಸಾಮಾಜಿಕ ಕಳಕಳಿಯಿರುವ ಈ ಚಿತ್ರವನ್ನು ರಾಜ್ಯದ ಎಲ್ಲಾ ಶಾಲಾಮಕ್ಕಳಿಗೂ ತೋರಿಸಬೇಕೆಂಬುದು ನಿರ್ಮಾಪಕರ ಮನದಾಳದ ಮಹದಾಸೆಯಾಗಿದೆ. ಮುಖ್ಯ ಪಾತ್ರದಲ್ಲಿರುವ  ಋತುಸ್ಪರ್ಶ ಸುಮಾರು ಎಂಟು ವರ್ಷಗಳಿಂದ ಟೇಕ್ವಾಂಡೋ ಸಮರ ಕಲೆಯನ್ನು ಕಲಿತು ಐದು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್‌ಬೆಲ್ಟ್ ಪಡೆದಿದ್ದಾರೆ ಎಂದರು. ಅಂತರಾಷ್ಟ್ರೀಯ ನೃತ್ಯಗಾರ್ತಿಯು ಆಗಿರುವ ಈ ಅಪ್ಪಟ ದೇಸಿ ಕಲಾ ಪ್ರತಿಭೆಯ ಮೊದಲ ಚಿತ್ರವಾಗಿದೆ. ವಿಯಟ್ನಾಂ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈ ಚಿತ್ರವು ಆಯ್ಕೆಯಾಗಿದ್ದು ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಗೆ ಋತು ಸ್ಪರ್ಶ ಆಯ್ಕೆಯಾಗಿದ್ದಾರೆ. ಈಗಾಗಲೇ ಕನ್ನಡದ ಬಾಲನಟಿಯಾಗಿ ಕಾಂಗ್ರೋ, ಬಾಲ್ಯಅತ್ಯಮೂಲ್ಯ, ಗಂಗೆಗೌರಿ, ತಾರಕೇಶ್ವರ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ೩೦ ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಮಾಸ್ಟರ್ ವಿಫರವಿ ರವರು ಸಮರಕಲೆಯನ್ನು ಹೇಳಿಕೊಟ್ಟಿದ್ದಾರೆ. ಚಿತ್ರದಲ್ಲಿ ೨ ಹಾಡುಗಳಿದ್ದು ಬೆಂಗಳೂರು ನಗರದ ರಾಜಾಜಿನಗರ, ಜಾಲಹಳ್ಳಿ, ಸಹಕಾರನಗರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರವು ಇದೇ ಆಗಸ್ಟ್ ೩೦ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು.ಆರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಋತು ಸ್ಪರ್ಶ ವಿಭಿನ್ನವಾಗಿ ಅಭಿನಯಿಸಿದ್ದಾರೆಂದರು.ಶಾಲಾ ವಿದ್ಯಾರ್ಥಿಗಳಿಗೆ ಅರ್ಧ ಬೆಲೆಯಲ್ಲಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಬಾಲನಟಿ ಋತು ಸ್ಪರ್ಶ ಮಾತನಾಡಿ ಆರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ.ಚಿತ್ರದಲ್ಲಿ ಅಭಿನಯಿಸಿದ್ದು ಸಂತಸ ತಂದಿದೆ.ಕೆಲವು ಕಡೆ ಅಭಿನಯಿಸುವಾಗ ಸಾಕಷ್ಟು ಪೆಟ್ಟು ತಿಂದಿದ್ದೇನೆ ಎಂದು ಅನುಭವ ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕಿ ಡಾ.ಸುಮಿತ ಪ್ರವೀಣ್,ಸಹ‌ನಿರ್ಮಾಪಕ‌ ಪ್ರವೀಣ್ ಸಿ ಬಾನು ಉಪಸ್ಥಿತರಿದ್ದರು.