ಮರುಳ ಶಂಕರ ದೇವರುಗಳು ಪರಿಶುದ್ಧ ಮನಸ್ಸಿನಿಂದ ಭಕ್ತರನ್ನು ಉದ್ದರಿಸಿದ್ದಾರೆ : ಶಿವಬಸವ ಸ್ವಾಮೀಜಿ
ಅಥಣಿ :ಆ.೨೫: ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಪರಮ ಶಿಷ್ಯರಾಗಿದ್ದ ಮರುಳ ಶಂಕರ ದೇವರು ಮೌನವಾಗಿಯೇ ಇದ್ದುಕೊಂಡು ಪರಿಶುದ್ಧ ಮನಸ್ಸಿನಿಂದ ಅವರ ಸೇವೆಯನ್ನು ಮಾಡುತ್ತಾ ಭಕ್ತರನ್ನು ಉದ್ದರಿಸಿದ್ದಾರೆ. ಈ ಭಾಗದಲ್ಲಿ ನಡೆದಾಡುವ ದೇವರು ಎನಿಸಿಕೊಂಡಿದ್ದ ಮರುಳು ಶಂಕರ ದೇವರು ಅವರ ಬದುಕೇ ನಮ್ಮೆಲ್ಲರಿಗೆ ತೆರೆದ ಪುಸ್ತಕವಿದ್ದಂತೆ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಅಥಣಿ ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. ೧ ರಲ್ಲಿ ಮೌನಯೋಗಿ ಶ್ರೀ ಮರುಳ ಶಂಕರ ದೇವರ ಸಭಾಭವನ ಲೋಕಾರ್ಪಣೆಗೊಳಿಸಿ, ಶ್ರೀ ಮರುಳ ಶಂಕರ ದೇವರ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಅಥಣಿಯ ಮುರಘೇಂದ್ರ ಶಿವಯೋಗಿಗಳಿಂದ ಮರುಜನ್ಮ ಪಡೆದ ಮರುಳ ಶಂಕರ ದೇವರು ಶ್ರೀಮಠದಲ್ಲಿ ಇದ್ದುಕೊಂಡು ಭಕ್ತರು ನೀಡುವ ಕಜ್ಜಾಯ ಮತ್ತು ಕಾಣಿಕೆಗಳನ್ನು ಕೆರೆಯ ನೀರು ಕೆರೆಗೆ ಚೆಲ್ಲಿದಂತೆ ಸದ್ಭಕ್ತರಿಗೆ ಮರಳಿ ನೀಡಿ ಆಶೀರ್ವದಿಸುತ್ತಿದ್ದರು. ಅವರು ಈ ಭಾಗದಲ್ಲಿ ಗುರುತಿಸಿದ ಕೊಳವೆ ಬಾವಿಗಳಲ್ಲಿ ಇಂದಿಗೂ ನೀರು ಬತ್ತದೆ ಇರುವುದು ಐತಿಹಾಸಿಕ ದಾಖಲೆ. ಅವರು ಮಠದ ಪೀಠಾಧಿಪತಿಗಳಾಗದೇ ಮೌನವಾಗಿ ಇದ್ದುಕೊಂಡು ಬಡವ ಶ್ರೀಮಂತ, ಜಾತಿ ಧರ್ಮ ಬೇದವಿಲ್ಲದೆ ಕರೆದವರ ಮನೆಗೆ ಹೋಗಿ ಆಶೀರ್ವದಿಸುತ್ತಿದ್ದರು. ಶತಾಯುಷಿಗಳಾಗಿ ಬದುಕಿದ ಮರುಳ ಶಂಕರ ದೇವರು ಈ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಸುಮಾರು ೧೭೦ ವರ್ಷಗಳ ಇತಿಹಾಸ ಹೊಂದಿರುವ ಈ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಕೋಣೆಯನ್ನು ಅಭಿವೃದ್ಧಿಪಡಿಸಿ ಅವರ ಹೆಸರಿನಲ್ಲಿ ಸಭಾಭವನ ಲೋಕಾರ್ಪಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮಹಾತ್ಮರ ಹೆಸರಿನಲ್ಲಿ ಪ್ರಾರಂಭವಾದ ಈ ಸಭಾಭವನ ಶೈಕ್ಷಣಿಕ ಮುತ್ತು ಇನ್ನಿತರ ಸಮಾಜಮುಖಿ ಕಾರ್ಯಗಳಿಗೆ ಸದ್ಬಳಕೆಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಯುವ ಮುಖಂಡ ಉದ್ಯಮಿ ಶಿವಕುಮಾರ ಸವದಿ ಮಾತನಾಡಿ ಶ್ರೀ ಮರುಳ ಶಂಕರ ದೇವರು ಒಬ್ಬ ಶ್ರೇಷ್ಠ ಜಲ ಸಂಶೋಧಕರಾಗಿದ್ದರು. ನಾನು ಕೂಡ ಇದರ ಬಗ್ಗೆ ನಂಬಿಕೆ ಹೊಂದಿರಲಿಲ್ಲ. ಸ್ವತಃ ನಮ್ಮ ಕಾರ್ಖಾನೆಯ ಆವರಣದಲ್ಲಿ ಅವರ ಗುರುತಿಸಿದ ಕೊಳವೆಬಾವಿ ಇಂದಿಗೂ ಬತ್ತದೆ ಉತ್ತಮ ರೀತಿಯಲ್ಲಿ ನೀರು ಒದಗಿಸುತ್ತಿರುವುದು ಒಂದು ಪವಾಡ ಎನ್ನಬಹುದು. ಅವರಿಗೆ ನಾವು ಕಾಣಿಕೆ ರೂಪದಲ್ಲಿ ಕೊಟ್ಟ ಹಣವನ್ನು ನಮಗೆ ಮರಳಿ ಆಶೀರ್ವಾದ ರೂಪದಲ್ಲಿ ನೀಡಿದ್ದರು. ಆ ಹಣವನ್ನು ನಾನು ಎಲ್ಲಿಯೂ ಬಳಕೆ ಮಾಡದೆ ಇಂದಿಗೂ ನಾನು ಭದ್ರವಾಗಿ ಇಟ್ಟುಕೊಂಡಿದ್ದೇನೆ. ಅವರ ಆಶೀರ್ವಾದದಿಂದಲೇ ಇಂದು ಉದ್ಯಮಿಯಾಗಿ ಬೆಳೆಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಪಾಲ್ಗೊಂಡು ಅವರ ಕುರಿತು ಒಂದೆರಡು ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಸಾಹಿತಿ ಶಿಕ್ಷಕಿ ಡಾ. ಅರ್ಚನಾ ಅಥಣಿ ಉಪನ್ಯಾಸ ನೀಡುತ್ತಾ ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪನೆ ಮಾಡಿದ ಅನುಭವ ಮಂಟಪವೇ ಮೊದಲ ಸಂಸತ್ತು. ಒಂದಿನ ಕಾಲದಲ್ಲಿ ಮೌನವಾಗಿ ಇದ್ದುಕೊಂಡು ೧೨ ವರ್ಷಗಳ ಕಾಲ ಸೇವೆ ಮಾಡಿದ ಮರಳು ಶಂಕರ ದೇವರ ಪರಂಪರೆಯೇ ಅಥಣಿಯ ಮುರುಘೇಂದ್ರ ಶಿವಯೋಗಿಗಳ ಪರಮಶಿಷ್ಯರಾದ ಮರಳು ಶಂಕರ ದೇವರು. ಅಥಣಿಯಲ್ಲಿ ನಡೆದಾಡುವ ದೇವರು ಎನಿಸಿಕೊಂಡಿದ್ದ ಅವರು ಶತಾಯುಷಿಗಳಾಗಿ ಬದುಕಿದವರು. ಅವರು ಶಿಕ್ಷಣ ಪಡೆದ ಶಾಲೆಯಲ್ಲಿ ಇಂದು ಅವರ ಹೆಸರಿನಲ್ಲಿ ಸಭಾ ಭವನ ಲೋಕಾರ್ಪಣೆ ಆಗುತ್ತಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ. ಈ ಶಾಲೆಯಲ್ಲಿ ನಾನು ಕೂಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸಂತಸವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಮರುಳ ಶಂಕರ ದೇವರ ಸಭಾಭವನ ಅಭಿವೃದ್ಧಿಗಾಗಿ ಸಹಾಯ ಸಹಕಾರ ನೀಡಿದ ಶಿಕ್ಷಕ, ಶಿಕ್ಷಕಿಯರಿಗೆ ಗೌರವಿಸಲಾಯಿತು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಎಂ ಹಿರೇಮಠ, ಶಾಲೆಯ ಪ್ರಧಾನ ಗುರುಮಾತೆ ಎ. ವೈ. ಧನಗೊಂಡ, ನಿವೃತ್ತ ಶಿಕ್ಷಕ ಎಸ್ ಎಸ್ ಹೂಟಿ, ಎ ಆರ್ ಸವದಿ, ಎ ಎಸ್ ಪೂಜಾರಿ, ಬಿ ಎಸ್ ಮಾಲಗಾರ, ಐ. ಕೆ. ಹೊನವಾಡ, ಜೆ. ಜಿ. ದೇವಮಾನೆ, ಬಿ ಎಂ ಅನಂತಪುರ, ಬಿ ಆರ್ ಬಸಗೌಡರ, ವೈ ಎಂ ನಡುವಿನಮನಿ, ಎಸ್ ಪಿ ಕೆಮ್ಮಣ್ಣವರ, ಅಶ್ವಿನಿ ಬಡಕಂಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚನ್ನಬಸಯ್ಯ ಇಟ್ನಾಳಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯೆ ಎ. ವೈ ದನಗೊಂಡ ಸ್ವಾಗತಿಸಿದರು. ಡಿ ಎಸ್ ಗುಡದಿನ್ನಿ ನಿರೂಪಿಸಿದರು. ಅಣ್ಣಾಸಾಬ ತೆಲಸoಗ ವಂದಿಸಿದರು.