ವಿದ್ಯಾರ್ಥಿಗಳ ಪ್ರಗತಿಗೆ ಧರ್ಮಸ್ಥಳ ಸಂಸ್ಥೆಯ ಸುಜ್ಞಾನ ನಿಧಿ ಉಪಯುಕ್ತ
ಚಿಕ್ಕನಾಯಕನಹಳ್ಳಿ, ಆ. ೨೫- ವಿದ್ಯಾರ್ಥಿಗಳ ಪ್ರಗತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಸುಜ್ಞಾನ ನಿಧಿ ಯೋಜನೆ ಅತ್ಯಂತ ಉಪಯುಕ್ತ ಹಾಗೂ ಜನಪ್ರಿಯ ಎನಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪೋಷಕರ ಪರಿಶ್ರಮಕ್ಕೆ ಪೂರಕವಾಗಿ ಶ್ರೀ ಕ್ಷೇತ್ರ ಸಂಸ್ಥೆಯು ಟ್ರಸ್ಟ್‌ನಡಿ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಈ ಸುಜ್ಞಾನ ನಿಧಿ ಶಿಷ್ಯ ವೇತನ ಯೋಜನೆ ದೂರದೃಷ್ಠಿಯುಳ್ಳದ್ದಾಗಿದೆ. ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದಿದ್ದಾರೆ ಎಂದರು.
ಸಾಮಾಜಿಕ ವಲಯದ ಮುಖ್ಯ ಆಯಾಮಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ನೆರವಿನ ಕಾರ್ಯ ಮೆಚ್ಚುವಂತದ್ದಾಗಿದೆ. ನೆರವು ಪಡೆದು ಬೆಳೆದ ಪ್ರತಿಯೋಬ್ಬರೂ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡುವ ಮನೋಭಾವ ಹೊಂದಲಿ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಿ. ದಿನೇಶ್ ಮಾತನಾಡಿ, ಸಂಸ್ಥೆಯಡಿ ರಾಜ್ಯದಲ್ಲಿ ೯೬೮೫೭ ವಿದ್ಯಾರ್ಥಿಗಳು ಶಿಷ್ಯ ವೇತನ ಪಡೆಯುತ್ತಿದ್ದಾರೆ. ೪೨ ವರ್ಷದ ಗಟ್ಟಿ ಅನುಭವದ ನೆಲೆಯಲ್ಲಿ ಸಂಸ್ಥೆ ಎಲ್ಲಡೆ ಜನರೊಂದಿಗೆ ಬೆರೆತು ಸ್ಥಿರವಾಗಿ ನಿಂತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಷ್ಯ ವೇತನ ಪಡೆದವರು ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಜಿ. ಲಿಂಗದೇವರು, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜಯಪ್ರದ, ದಲಿತ ಸಂಘರ್ಷ ಸಮಿತಿಯ ಸದಸ್ಯ ಸಿ.ಎಸ್. ಲಿಂಗದೇವರು, ಯೋಜನಾಧಿಕಾರಿ ಎಲ್.ಬಿ. ಪ್ರೇಮಾನಂದ್ ಮತ್ತಿತರರು ಉಪಸ್ಥಿತರಿದ್ದರು. ಮೇಲ್ವಿಚಾರಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.