ಗಿಡ-ಗಂಟೆಗಳ ತಾಣ ಸಾಲಾಪುರ ಅಂಗನವಾಡಿ ಕೇಂದ್ರ
ಹುಳಿಯಾರು, ಆ. ೨೫- ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾಲಪುರ ಗ್ರಾಮದ ಅಂಗನವಾಡಿಯ ಸುತ್ತ ಗಿಡ-ಗಂಟೆಗಳು ತುಂಬಿ ಹೋಗಿದೆ. ಅಂಗನವಾಡಿ ಕೇಂದ್ರದ ಸುತ್ತ ಸ್ವಚ್ಚತೆ ಮರೀಚಿಕೆಯಾಗಿದ್ದು, ಮಲಿನ ವಾತಾವರಣದಲ್ಲಿ ಮಕ್ಕಳು ಓಡಾಡುವಂತಾಗಿದೆ. ತಕ್ಷಣ ಗ್ರಾಮ ಪಂಚಾಯ್ತಿ ಗಿಡಗಳನ್ನು ತೆರವು ಮಾಡಿ ನೈರ್ಮಲ್ಯ ಕಾಪಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಂಗನವಾಡಿಗೆ ಹೋಗುವ ದಾರಿಯನ್ನೂ ಸಹ ಆವರಿಸಿಕೊಂಡು ಗಿಡ-ಗಂಟಿ, ಹುಲ್ಲುಗಳು ಬೆಳೆದಿದ್ದು, ಅದರಲ್ಲೂ ಕೆಲವು ಕಡೆಯಂತೂ ಆಳೆತ್ತರಕ್ಕೆ ಬೆಳೆದು ನಿಂತಿವೆ. ಪರಿಣಾಮ ಪುಟಾಣಿ ಮಕ್ಕಳು ಇರುವ ಪ್ರದೇಶದ ಸುತ್ತ- ಮುತ್ತ ಈ ರೀತಿ ಗಿಡ-ಗಂಟಿಗಳು ಆವರಿಸಿಕೊಂಡು ಅವುಗಳು ಹಾವು- ಚೇಳುಗಳ ಆವಾಸತಾಣವಾದರೆ ಮಕ್ಕಳ ಸುರಕ್ಷತೆಯ ಭೀತಿಯೂ ಕಾಡುವಂತಾಗಿದೆ. ಅಲ್ಲದೆ ಈಗಾಗಲೇ ಗಿಡಗಂಟೆಗಳಿಂದ ಸೊಳ್ಳೆಗಳು ಹೆಚ್ಚಿದ್ದು, ಸಾಂಕ್ರಾಮಿಕ ರೋಗದ ಆತಂಕ ಕಾಡುತ್ತಿದೆ.
ಗಿಡ-ಗಂಟೆಗಳು ಕಾಡಿನಂತೆ ಬೆಳೆದಿರುವುದರಿಂದ ಮಕ್ಕಳನ್ನು ಆಟವಾಡಲೂ ಬಿಡದ ಪರಿಸ್ಥಿತಿ ಅಂಗನವಾಡಿ ಕಾರ್ಯಕರ್ತೆಯದ್ದಾಗಿದೆ. ಮಕ್ಕಳು ಮಲಮೂತ್ರ ವಿಸರ್ಜನೆಗೆ ಕೇಳಿದರೆ ಮಕ್ಕಳೊಬ್ಬರನ್ನೇ ಬಿಡದೆ ತಾವೇ ಜತೆಯಲ್ಲಿ ಕರೆದುಕೊಂಡು ಹೋಗಿ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಮಳೆಗಾಲದಲ್ಲಂತೂ ಭೂಮಿಯ ಹಬೆಗೆ ವಿಷ ಜಂತುಗಳು ಅಂಗನವಾಡಿ ಒಳಗೆ ಪ್ರವೇಶಿಸದಂತೆ ಬಾಗಿಲಲ್ಲೇ ಕಾದು ಕೂರಬೇಕಿದೆ.
ನೈರ್ಮಲ್ಯಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡುವ ಪಂಚಾಯ್ತಿ ಪುಟಾಣಿ ಮಕ್ಕಳು ಓಡಾಡುವ ಈ ಅಂಗನವಾಡಿ ಸುತ್ತಲೂ ಗಿಡ-ಗಂಟೆಗಳನ್ನು ಈ ರೀತಿಯಾಗಿ ಬೆಳೆಯಲು ಬಿಟ್ಟಿರುವ ಗ್ರಾ.ಪಂ. ನಡೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಅಲ್ಲದೆ ಈ ಅಂಗನವಾಡಿ ಕೇಂದ್ರಕ್ಕೆ ಆಗಾಗ ಬಾಣಂತಿಯರು, ಗರ್ಭಿಣಿಯರೂ ಸಹ ಬಂದೋಗುತ್ತಿದ್ದು, ಎಲ್ಲರೂ ವಿಷಜಂತುಗಳ ಭೀತಿಯಲ್ಲಿ ಓಡಾಡುವಂತಾಗಿದೆ. ಇನ್ನಾದರೂ ಕೋರಗೆರೆ ಗ್ರಾಮ ಪಂಚಾಯ್ತಿಯವರು ಅಂಗನವಾಡಿ ಸುತ್ತ ನೈರ್ಮಲ್ಯ ಕಾಪಾಡಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.