ಸವಿತಾ ಸಮಾಜದಜಿಲ್ಲಾ ಸಂಪರ್ಕ ಕೇಂದ್ರ: ಸಚಿವ ಸೋಮಣ್ಣ ಲೋಕಾರ್ಪಣೆ
ತುಮಕೂರು, ಆ. ೨೫- ನಗರದ ಗಾರ್ಡನ್ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಸವಿತಾ ಸಮಾಜದ ಜಿಲ್ಲಾ ಸಂಪರ್ಕ ಕೇಂದ್ರವನ್ನು ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರಾದ ಕಟ್‌ವೆಲ್ ರಂಗನಾಥ್ ಅವರ ನೇತೃತ್ವದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿರುವ ಸವಿತಾ ಸಮಾಜದವರ ವಿವಿಧ ಉಪಯೋಗಗಳಿಗಾಗಿ ಅಂದರೆ ವೃತ್ತಿ ಕೌಶಲ್ಯ, ಸರ್ಕಾರದಿಂದ ಸಾಲ ಸೌಲಭ್ಯ, ವಧು-ವರರ ಅನ್ವೇಷಣೆ ಮತ್ತು ಮಾಹಿತಿ ವಿನಿಮಯ, ವಿದ್ಯಾರ್ಥಿ ನಿಲಯ ಮತ್ತು ಉನ್ನತ ಶಿಕ್ಷಣ ಕುರಿತು ಮಾಹಿತಿ ಸೇರಿದಂತೆ ಕ್ಷೌರಿಕ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಹಾಗೂ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸವಿತಾ ಸಮಾಜದವರಿಗೆ ಅನುಕೂಲಕರವಾಗಲು ಮಾಹಿತಿ ಕೇಂದ್ರವನ್ನು ನಾನು ಉದ್ಘಾಟಿಸಿರುವುದು ತುಂಬಾ ಸಂತೋಷಕರ ವಿಷಯವಾಗಿದೆ ಎಂದರು.
ಕ್ಷೌರಿಕ ಸಮಾಜ ಅಥವಾ ಸವಿತಾ ಸಮಾಜದವರು ಬಹುತೇಕ ಸಮಾಜಮುಖಿ ಜೀವನದಿಂದ ದೂರವಿದ್ದು, ಇಂತಹ ಸಮಾಜವನ್ನು ಮುನ್ನಲೆಗೆ ತರುವ ಉದ್ದೇಶ ಹೊಂದಿರುವ ಕಟ್‌ವೆಲ್ ರಂಗನಾಥ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಈ ಸಮಾಜಕ್ಕೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ ಅಭಿವೃದ್ದಿಗೊಳಿಸಲು ನಾನು ಸಹ ಸಹಕಾರಿಯಾಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಬಿಜೆಪಿ ಮುಖಂಡರಾದ ನೆ.ಲ.ನರೇಂದ್ರ ಬಾಬು, ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಧನಿಯಕುಮಾರ್, ಜಿಲ್ಲಾ ಸವಿತಾ ಸಮಾಜ ಯುವ ಪಡೆ ಜಿಲ್ಲಾಧ್ಯಕ್ಷರಾದ ಕಟ್‌ವೆಲ್ ರಂಗನಾಥ್ ಸೇರಿದಂತೆ ಸವಿತಾ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.