ರೋಗಿಗಳ ಚೇತರಿಕೆಯಲ್ಲಿ ಔಷಧಿಗಳ ಪಾತ್ರ ಪ್ರಮುಖ
ತುಮಕೂರು, ಆ. ೨೫- ರೋಗಿಗಳ ಚೇತರಿಕೆಯಲ್ಲಿ ಔಷಧಿಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಔಷಧಿಗಳ ಅಧ್ಯಯನ ಕ್ಷೇತ್ರವೂ ವೇಗ ಪಡೆದುಕೊಳ್ಳಬೇಕಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ. ಸಚ್ಚಿದಾನಂದ್ ಎಸ್. ತಿಳಿಸಿದರು.
ಇಲ್ಲಿನ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನ್ಯಾಷನಲ್ ಫಾರ್ಮಾಕೋಲಜಿ ದಿನದ ಅಂಗವಾಗಿ ನಡೆದ ಫಾರ್ಮಾಕೋಥೆರ ಪ್ಯೂಟಿಕ್ಸ್ ಇತ್ತೀಚಿನ ಬೆಳವಣಿಗೆಗಳ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ (ಸಿಎಂಇ)ಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಔಷಧಿ ಬಳಕೆಗೆ ಬರುವ ಮುನ್ನ ಹತ್ತಾರು ವರ್ಷಗಳ ಕ್ಲಿನಿಕಲ್ ಪ್ರಯೋಗಗಳ ದಾಟಿ ರೋಗಿಯ ಕೈ ಸೇರುತ್ತದೆ. ಆದ್ದರಿಂದ ಫಾರ್ಮಕೋಲಜಿಸ್ಟ್‌ಗಳ ಪಾತ್ರ ಅತ್ಯಂತ ಜವಾಬ್ದಾರಿಯುತವಾಗಿದೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ಪ್ಲೇಗ್, ಡೆಂಗ್ಯೂ, ಕಾಲರ, ಕೊರೊನಾದಂತಹ ಪಿಡುಗುಗಳ ವಿರುದ್ಧ ಔಷಧಿ ಕಂಡು ಹಿಡಿದು, ಅದರ ನಿಖರ ಪರಿಣಾಮಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಫಾರ್ಮಕಾಲಜಿಸ್ಟ್‌ಗಳು ಹಾಗೂ ಅದಕ್ಕೆ ಭಾಗಿಯಾದ ಸ್ವಯಂ ಸೇವಕರನ್ನು ನಾವು ಸದಾ ಸ್ಮರಿಸಬೇಕು ಎಂದರು.
ವಯೋವೃದ್ಧರಲ್ಲಿ ಮರೆವಿನ ಖಾಯಿಲೆಗಳು ಹಾಗೂ ಔಷಧಿಗಳ ಬಳಕೆ ಕುರಿತು ಉಪನ್ಯಾಸ ನೀಡಿದರು.
ಔಷಧಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪ್ರಿಯಾದರ್ಶನಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಔಷಧಿಶಾಸ್ತ್ರದ ಪಿತಾಮಹ ಡಾ.ರಾಮನಾಥ್ ಚೋಪ್ರಾ ಔಷಧಿ ಶಾಸ್ತ್ರ ಭಾರತದಲ್ಲಿ ಆರಂಭವಾಗಲು ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಅವುಗಳ ನಿರಂತರ ಅಧ್ಯಯನಕ್ಕೆ ನಾಂದಿಯಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಔಷಧಿಶಾಸ್ತ್ರದ ಮುಖ್ಯಸ್ಥೆ ಡಾ. ಪದ್ಮಜ ಉದಯ್ ಕುಮಾರ್, ಔಷಧಿ ಶಾಸ್ತ್ರದ ಉಪನ್ಯಾಸಕರಾದ ಡಾ. ಪ್ರದೀಪ್‌ಕುಮಾರ್, ಡಾ. ಪ್ರಶಾಂತ್, ಡಾ. ಪ್ರದೀಪ್, ಡಾ. ಇಂದುಶ್ರೀ, ಡಾ. ಮೋಹಿತ್ ಇತರ ವಿಭಾಗದ ಮುಖ್ಯಸ್ಥರುಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.