ಮಧುಗಿರಿಯಲ್ಲಿ ಸಚಿವರಿಂದ ದ್ವೇಷದ ಕಾರಣ: ಎಂವಿವಿ ಆರೋಪ
ಮಧುಗಿರಿ, ಆ. ೨೫- ತಾಲ್ಲೂಕಿನಲ್ಲಿ ಸಚಿವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಯಾರು ಸಚಿವರಿಗೆ ವಿರುದ್ದವಾಗಿದ್ದಾರೋ ಅಂತಹವರಿಗೆ ವಿನಾ ಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಎಂ.ವಿ. ವೀರಭದ್ರಯ್ಯ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬದಲಾಗಿ ೧೫ ತಿಂಗಳಾಗಿದೆ. ಅವರು ಸಚಿವರೂ ಸಹ ಆಗಿದ್ದು, ಅಧಿಕಾರ ಕೈಗೆ ಸಿಕ್ಕರೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ನಡೆದಿಲ್ಲ. ಗಂಜಲಗುಂಟೆ, ಕುರುಬರಹಳ್ಳಿ, ಸಜ್ಜೆಹೊಸಹಳ್ಳಿಯ ಯೋಜನೆಗಳು ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಾಗಿದ್ದು, ಈ ಕಾಮಗಾರಿಯ ಕೆಲಸಗಳು ಮಾತ್ರ ನಡೆಯುತ್ತಿವೆ. ನನ್ನ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಇಂಡಸ್ಟ್ರಿಯಲ್ ಕಾಮಗಾರಿಗೆ ಚಾಲನೆ ನೀಡದೆ ಸ್ಥಗಿತಗೊಳಿಸಲಾಗಿದೆ. ಜನರಿಗೆ ಅನುಕೂಲವಾಗುವ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಕಲ್ಲು ಗಣಿಗಾರಿಕೆಯ ಗುತ್ತಿಗೆ ಸಾಂಗೋಪವಾಗಿ ನಡೆಯುತ್ತಿದೆ ಎಂದು ದೂರಿದರು.
ಹಾಲು ಉತ್ಪಾದಕ ರೈತರಿಗೆ ಸಹಾಯ ಧನ ಬಂದಿಲ್ಲ. ಪಟ್ಟಣದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಈ ಗುಂಡಿಗಳಿಗೆ ಮಣ್ಣು ತುಂಬಿದ್ದಾರೆ. ಮನೆ ಹಂಚಿಕೆ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ. ಅವರು ಬಲಾಢ್ಯ ಸಚಿವರಾಗಿದ್ದು, ಅವರ ಮಾತು ನಡೆಯುತ್ತಿದೆ. ಆದ್ದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಭದ್ರಾ ಮೇಲ್ಡಂಡೆ ಯೋಜನೆಗೆ ಮಧುಗಿರಿ ತಾಲ್ಲೂಕನ್ನೂ ಸೇರಿಸಿ ಎಂದು ಒತ್ತಾಯಿಸಿದ ಅವರು, ಸಹಕಾರಿ ಸಂಘದಲ್ಲಿ ಮೀಸಲಾತಿ ತಂದಿದ್ದು ಸಂತಸದ ವಿಚಾರ. ಡಿಸಿಸಿ ಬ್ಯಾಂಕ್‌ನಲ್ಲೂ ಮೀಸಲಾತಿ ತರಬೇಕು ಎಂದು ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಸುಮಾರು ೮೦ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದು, ಅವರಿಗೆ ಅನುಕೂಲವಾಗಿರುವ ಸಂಘಗಳಲ್ಲಿ ಚುನಾವಣೆ ನಡೆಯುತ್ತಿದೆ. ಅವರಿಗೆ ವ್ಯತ್ಯಾಸವಾಗಿರುವ ಕಡೆ ಚುನಾವಣೆ ನಡೆಸುತ್ತಿಲ್ಲ. ಒಬ್ಬರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು, ತಾಲ್ಲೂಕಿನ ಎ.ಆರ್.ಸಿ.ಎಸ್ ಅಧಿಕಾರಿಗಳು ಮಂತ್ರಿಗಳು ಹೇಳಿದಂತೆ ಕೇಳುತ್ತಿದ್ದಾರೆ. ಎಲ್ಲಾ ಹಾಲು ಉತ್ಪಾದಕ ಸಂಘಗಳಲ್ಲೂ ಚುನಾವಣೆ ನಡೆಯಬೇಕು. ದ್ವೇಷದ ರಾಜಕಾರಣ ಬಿಡಬೇಕು. ಅವರು ತಮ್ಮ ವ್ಯಾಪ್ತಿ ಮೀರಿ ನಡೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನ ಅಧಿಕಾರಿಗಳೇ ಯಾರಿಗೂ ಅನ್ಯಾಯ ಮಾಡಬೇಡಿ. ನಾಳೆ ನೀವೇ ತಪ್ಪಿತಸ್ಥರಾಗಬೇಕಾಗುತ್ತದೆ. ಕಾನೂನು ಬದ್ದವಾಗಿ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ಕೊಡಲಾಗುತ್ತಿದೆ. ಕೊಂಡವಾಡಿ ಚಂದ್ರಶೇಖರ್ ರವರಿಗೂ ಕೊಂಡವಾಡಿ ಹಾಲಿನ ಸೊಸೈಟಿಯಲ್ಲಿ ಗೆಲ್ಲಬಾರದು ಎಂಬ ಉದ್ದೇಶದಿಂದ ತೊಂದರೆ ಕೊಡುತ್ತಿದ್ದಾರೆ. ವಾಸಸ್ಥಳ ದೃಢೀಕರಣ ಪತ್ರ ಸಹ ನೀಡದೇ ೮ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸ್ಟೇ ತರುವ ಪರಿಸ್ಥಿತಿ ಇದೆ. ಕಾಲಚಕ್ರ ಹೀಗೇ ಇರಲ್ಲ. ಮತ್ತೆ ತಿರುಗುತ್ತದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಬದಲಾವಣೆಯ ತೀರ್ಪು ನೀಡಿದ್ದು, ಸಚಿವರು ಇದೊಂದು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಬೇಕು ಅಭಿವೃದ್ಧಿ ಕಾಮಗಾರಿ ಕಡಿಮೆಯಾದರೂ ಚಿಂತೆಯಿಲ್ಲ ಆದರೆ ದ್ವೇಷದ ರಾಜಕಾರಣ ಮಾಡಬೇಡಿ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಮಂತ್ರಿ ಸ್ಥಾನ ತೆಗೆದುಕೊಂಡ ಸಚಿವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮಧುಗಿರಿ ತಾಲ್ಲೂಕಿನಲ್ಲಿ ಯಾವತ್ತೂ ದ್ವೇಷದ ರಾಜಕಾರಣ ನಡೆದಿಲ್ಲ. ಈಗ ಇವರು ಪ್ರಾರಂಭ ಮಾಡಿದ್ದಾರೆ. ಕೊಂಡವಾಡಿ ಹಾಲು ಉತ್ಪಾದಕ ಸಂಘ ತನಿಖೆ ನಡೆಸಿದರು. ೧೦ ವರ್ಷದಲ್ಲಿ ಯಾವುದೇ ಸಂಘದಲ್ಲೂ ೧೦ ರೂ. ಖರ್ಚು ಮಾಡಿಸಿಲ್ಲ. ಅಧಿಕಾರಿಗಳಿಗೆ ಸರ್ಕಾರ ಸಂಬಳ ನೀಡುತ್ತದೋ ಮನೆಯಿಂದ ತರುತ್ತಾರೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಎ.ಆರ್.ಸಿ.ಎಸ್ ಅಧಿಕಾರಿಗಳು ಬಹಳಷ್ಟು ತೊಂ ದರೆ ಮಾಡುತ್ತಿದ್ದಾರೆ. ನನ್ನ ಸದಸ್ಯತ್ವ ತೆಗೆದರು. ನನ್ನ ಎಲ್ಲಾ ದಾಖಲೆಗಳಿದ್ದರೂ ಸಹ ನನಗೆ ಬೇಕೆಂದೇ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದು, ಭಯದ ವಾತಾವರಣದಲ್ಲಿ ಬದುಕಬೇಕಿದೆ. ಹಾಲು ಉತ್ಪಾದಕ ಸಂಘದ ಚುನಾವಣೆ ಮಾಡಿ ಎಂದು ಪತ್ರ ಬರೆದರೂ ಕೊಂಡವಾಡಿಯಲ್ಲಿ ಚುನಾವಣೆ ಮಾಡುತ್ತಿಲ್ಲ. ವ್ಯವಸ್ಥೆಯಲ್ಲಿ ಏನು ನಡೆಯುತ್ತಿದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಷ್ಠಿಯಲ್ಲಿ ಪುರಸಭಾ ಸದಸ್ಯ ತಿಮ್ಮರಾಯಪ್ಪ, ಜೆಡಿಎಸ್ ಮುಖಂಡರಾದ ಸಿದ್ದಣ್ಣ, ಮೂಡ್ಲಪ್ಪ, ರವೀಂದ್ರ, ಹರೀಶ್, ಲಕ್ಷ್ಮಿನರಸಪ್ಪ, ಎಸ್.ಡಿ. ಕೃಷ್ಣಪ್ಪ, ಮಿಲ್ ಚಂದ್ರಣ್ಣ, ಶ್ರೀಧರ, ಸಿಡದರಗಲ್ಲು ಶ್ರೀನಿವಾಸ್, ಕಂಬತನಳ್ಳಿ ರಘು, ವೆಂಕಟಪುರ ಗೋವಿಂದರಾಜು, ರಘುವೀರ್ ಮತ್ತಿತರರು ಉಪಸ್ಥಿತರಿದ್ದರು.