ಎಬಿಸಿಡಿ ಗೊತ್ತಿಲ್ಲದವರಿಗೆ ಸಚಿವ ರಾಜಣ್ಣ ಟೀಕಿಸುವ ನೈತಿಕತೆ ಇಲ್ಲ: ನಾಗೇಶ್‌ಬಾಬು
ಮಧುಗಿರಿ, ಆ. ೨೫- ಸಹಕಾರ ಕ್ಷೇತ್ರದಲ್ಲಿ ಸಚಿವ ಕೆ.ಎನ್. ರಾಜಣ್ಣನವರು ರಾಷ್ಟ್ರದಲ್ಲೇ ಕ್ರಾಂತಿ ತರುತ್ತಿದ್ದು, ಎಬಿಸಿಡಿ ಗೊತ್ತಿಲ್ಲದವರಿಗೆ, ಹಾಲಿನ ಕಳ್ಳರಿಗೆ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ತುಮುಲ್ ಮಾಜಿ ಅಧ್ಯಕ್ಷ ಬಿ. ನಾಗೇಶ್ ಬಾಬು ತಿರುಗೇಟು ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ಈ ಹಿಂದೆ ನಿಮಗೆ (ಕೊಂಡವಾಡಿ) ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ್ದಿದ್ದರೂ ಪ್ರಭಾವಿ ರಾಜಕಾರಣಿಯನ್ನಾಗಿ ಬೆಳೆಸಿದವರು ಯಾರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಅವರಿಂದ ರಾಜಕೀಯ ಅನುಭವಿಸಿರುವ ನೀವುಗಳು ಈಗ ಅವರ ಬಗ್ಗೆಯೇ ಹೀಗೆ ಮಾತನಾಡುತ್ತಿರುವುದು ಯಾವ ನ್ಯಾಯ. ಹಾಲಿನ ಟ್ಯಾಂಕರ್ ಗೆ ಸುಮಾರು ೨೫೦೦ ಲೀಟರ್ ನೀರು, ಉಪ್ಪು ಬೆರೆಸಿ ಲಕ್ಷಾಂತರ ರೂ.ಗಳ ದಂಧೆ ಮಾಡಿದ್ದು, ಈ ಪ್ರಕರಣದಲ್ಲಿ ಮೂವರು ಅಮಾನತ್ತಾಗಿದ್ದಾರೆ. ಇದು ಯಾರ ಅವಧಿಯಲ್ಲಿ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ಕುಟುಕಿದರು.
ಮಾಜಿ ಶಾಸಕರು ವಿಚಾರ ಗೊತ್ತಿಲ್ಲದೇ ವಿನಾ ಕಾರಣ ಆರೋಪಗಳನ್ನು ಮಾಡುತ್ತಿದ್ದು, ಇವರಿಗೆ ಬೆಂಗಳೂರಿನಲ್ಲಿ ಅಕ್ರಮಗಳನ್ನು ಮಾಡಿ ಅನುಭವವಿರುವುದರಿಂದಲೇ ಹೀಗೆ ಮಾತನಾಡುತ್ತಿದ್ದಾರೆ. ಇವರ ಆರೋಪಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಇವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಸಚಿವರ ವಿರುದ್ದ ವೃಥಾ ಆರೋಪ ಮಾಡುತ್ತಿದ್ದಾರೆ. ರಾಜಣ್ಣನವರು ಈ ಹಿಂದೆ ಶಾಸಕರಾಗಿದ್ದಾಗ ರೈತರಿಗೆ ೨೦೦ ಕೋಟಿ ಸಾಲ ನೀಡಿ ಅದನ್ನು ಮನ್ನಾ ಮಾಡಿದ್ದು, ನಮ್ಮ ಕ್ಷೇತ್ರದ ರೈತರಿಗೆ ಮತ್ತೆ ೨೦೦ ಕೋಟಿ ಸಾಲ ಕೊಡಿ ಎಂದು ಕೇಳುವುದನ್ನು ಬಿಟ್ಟು ತಾಲ್ಲೂಕಿಗೆ ಎಷ್ಟು ಸಾಲ ನೀಡಲಾಗಿದೆ, ಅದರಲ್ಲಿ ಎಷ್ಟು ಮನ್ನಾ ಆಗಿದೆ ಎಂದು ವಿಧಾನಸಭೆಯಲ್ಲಿ ದಾಖಲೆ ಕೇಳಿದ್ದಾರೆ, ಇದು ಮಾಜಿ ಶಾಸಕರಿಗೆ ಕ್ಷೇತ್ರದ ರೈತರ ಬಗ್ಗೆ ಯಾವ ರೀತಿಯ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಟಾಂಗ್ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ ಮಾತನಾಡಿ, ದ್ವೇಷದ ರಾಜಕಾರಣದ ಬಗ್ಗೆ ಮಾಜಿ ಶಾಸಕರಿಂದ ಕೇಳಿ ತಿಳಿದುಕೊಳ್ಳಬೇಕಿಲ್ಲ. ಹಿಂದೆ ನಿಮ್ಮದೇ ಸಮುದಾಯದ ರಾಜಗೋಪಾಲ್ ಎಂಬುವರ ಮನೆಯಲ್ಲಿ ಇದ್ದ ಎತ್ತಿನಹೊಳೆ ಕಚೇರಿ ಎತ್ತಂಗಡಿ ಮಾಡಿಸಿದ್ದು ಯಾರು ಎಂಬುದು ಜನತೆಗೆ ಗೊತ್ತಿದೆ. ಕ್ಷೇತ್ರದಲ್ಲಿ ಸಚಿವರು ತಾಲ್ಲೂಕಿನಲ್ಲಿರುವ ಎಲ್ಲಾ ಬಡವರಿಗೂ ಸವಲತ್ತುಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಮ್ಮ ಅವಧಿಯಲ್ಲಿದ್ದ ಅಧಿಕಾರಿಗಳನ್ನೇ ಈಗಲೂ ಮುಂದುವರಿಸಲಾಗುತ್ತಿದೆ. ಆಗ ಒಳ್ಳೆಯವರಾಗಿದ್ದ ಅಧಿಕಾರಿಗಳು ಈಗ ಹೇಗೆ ಕೆಟ್ಟವರಾಗುತ್ತಾರೆ ಎಂದು ಪ್ರಶ್ನಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ ಮಾತನಾಡಿ, ಸಚಿವರು ಕ್ಷೇತ್ರಕ್ಕೆ ೪೫೦೦ ಮನೆಗಳನ್ನು ತಂದಿದ್ದಾರೆ. ನಗರಕ್ಕೆ ೪೫೦ ಮನೆ ಮಂಜೂರಾತಿ ಹಂತದಲ್ಲಿದೆ. ಪಟ್ಟಣದ ಅಭಿವೃದ್ಧಿಗೆ ೨೫ ಕೋಟಿ, ಅಲ್ಪಸಂಖ್ಯಾತರ ನಿಗಮದಿಂದ ೫ ಕೋಟಿ ಸೇರಿ ೩೦ ಕೋಟಿ ಮಂಜೂರಾಗಿದೆ. ಕ್ರೀಡಾಂಗಣದ ಅಭಿವೃದ್ಧಿ ಗೆ ೧೦ ಕೋಟಿ ಮೀಸಲಿರಿಸಲಾಗಿದೆ. ಅಭಿವೃದ್ಧಿ ಈಗಷ್ಟೇ ಆರಂಭವಾಗಿದೆ. ಮುಂದಿನ ಚಿತ್ರಣ ಬಾಕಿ ಇದ್ದು, ಅದನ್ನು ತೋರಿಸುತ್ತಾರೆ. ಮಾಜಿ ಶಾಸಕರೇ ನಿಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟು ಮನೆ ತಂದಿದ್ದೀರಾ ಎಂದರು.
ಕೆಎಂಎಫ್ ನಿರ್ದೇಶಕ ಕಾಂತರಾಜು ಮಾತನಾಡಿ, ತುಮುಲ್‌ನಲ್ಲಿ ಆರಂಭವಾಗಿರುವ ರೈತ ಕಲ್ಯಾಣ ಟ್ರಸ್ಟ್ ನೆನೆಗುದಿಗೆ ಬಿದ್ದಿಲ್ಲ. ಅದರ ಅಡಿಯಲ್ಲಿ ನೊಂದ ಫಲಾನುಭವಿ ಹಾಲು ಉತ್ಪಾದಕ ರೈತರಿಗೆ ಪರಿಹಾರದ ಚೆಕ್‌ಗಳನ್ನು ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರ ಮೂಲಕ ವಿತರಿಸಿಕೊಂಡು ಬಂದಿದ್ದು, ವೃಥಾ ಆರೋಪ ಮಾಡುವುದು ಸರಿಯಲ್ಲ. ತುಮಕೂರಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ, ಹಾಸ್ಟೆಲ್‌ನಲ್ಲಿ ಸುಮಾರು ೧೦ ವರ್ಷಗಳಿಂದ ಸಿಸಿ ಕ್ಯಾಮರಾ ಅಳವಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವರು ಹಾಗೂ ಎಂಎಲ್‌ಸಿ ರವರ ಗಮನಕ್ಕೆ ತಂದು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ, ಆದಿನಾರಾಯಣ ರೆಡ್ಡಿ, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಮುಖಂಡರಾದ ಸುವರ್ಣಮ್ಮ, ಇಂದಿರಾ ದೇನಾನಾಯ್ಕ, ಪುರಸಭಾ ಸದಸ್ಯರಾದ ಗೋವಿಂದರಾಜು, ಅಲಿಂ, ಮುಖಂಡರಾದ ಆನಂದ ಕೃಷ್ಣ, ಕಿಶೋರ್, ಉಮೇಶ್, ಎಂ.ಎಸ್. ಶಂಕರನಾರಾಯಣ ಜಗ್ಗಿ, ಶ್ರೀಧರ್, ಬಗರ್ ಹುಕುಂ ಕಮಿಟಿ ಸದಸ್ಯರಾದ ರಾಮಣ್ಣ, ಡಿ.ಎಚ್ ನಾಗರಾಜು ಉಪಸ್ಥಿತರಿದ್ದರು.