ನಾಡಿನ ಹಿರಿಮೆ, ಸಂಸ್ಕೃತಿ ಎತ್ತಿ ಹಿಡಿಯುವೆ: ರಾಜ್ಯಪಾಲ
ಸಂಜೆವಾಣಿ ನ್ಯೂಸ್
ಮೈಸೂರು:ಆ.25:– ಚಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಅವರನ್ನು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದವತಿಯಿಂದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಾಗರೀಕ ಅಭಿನಂದನಾ ಸಮಿತಿವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಎಚ್ ವಿಜಯಶಂಕರ್ ನಾನು ಮುಕ್ತ ಮನಸ್ಸಿನಿಂದ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತೇನೆ ನಮ್ಮ ನಾಡಿನ ಹಿರಿಮೆ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದರು.
ನಾನು ರಾಜಪಾಲನಾಗಿರುವುದು ಮೇಘಾಲಯಕ್ಕೆ. ಅಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದೆ, ಮಹಿಳೆಯೇ ಮನೆಯ ಯಜಮಾನಿ, ಅಂತಹ ಉತ್ತಮವಾದ ಗೌರವ ಸ್ಥಾನ ಮಹಿಳೆಯರಿಗೆ ಇದೆ. ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಹುದ್ದೆ ನಿಭಾಯಿಸಿದ ಮಹನೀಯರ ಮಾದರಿಯನ್ನು ಅನುಸರಿಸುತ್ತೇನೆ ಎಂದು ಎಸ್.ಎಂ ಕೃಷ್ಣ ಮತ್ತು ಮೈಸೂರಿನ ಮಹಾರಾಜರು ಮತ್ತಿತರರನ್ನು ಸ್ಮರಿಸಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ರಾಜ್ಯಪಾಲರ ಹುದ್ದೆ ಸುಲಭವಾದುದಲ್ಲ ಅದು ಜಟಿಲ, ಕೇವಲ ಸಹಿ ಹಾಕುವುದಲ್ಲ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಸಲಹೆ ನೀಡಿದರು. ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಹೇಳಿರುವುದು ನಿಜ. ಅದರಂತೆ ಸಾಂವಿಧಾನಿಕ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಿ ಮೈಸೂರಿಗೆ ಮತ್ತು ಕರ್ನಾಟಕಕ್ಕೆ ಇನ್ನೂ ಹೆಚ್ಚು ಒಳ್ಳೆಯ ಹೆಸರನ್ನು ತರುವಂತಾಗಲಿ ಎಂದು ಹಾರೈಸಿದರು.
ಸನ್ಮಾನ ಸಮಾರಂಭಕ್ಕೂ ಮೊದಲು ಸಿ.ಎಚ್.ವಿಜಯಶಂಕರ್ ಅವರು ಅವಧೂತ ದತ್ತಪೀಠದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಾಲಯ, ಶ್ರೀದತ್ತ ಸನ್ನಿಧಿಗೆ ಭೇಟಿ ನೀಡಿ ದೇವರುಗಳ ದರ್ಶನ ಪಡೆದುಕೊಂಡರು. ಮಾಜಿ ಶಾಸಕ ಮಾರುತಿರಾವ್ ಪವಾರ್ ಗಣ್ಯರಿಗೆ ಸ್ವಾಗತ ಕೋರಿದರು. ಮಾಜಿ ಶಾಸಕ ವೈ.ಎಸ್.ವಿ ದತ್ತ ಅಭಿನಂದನಾ ನುಡಿ ಆಡಿದರು. ಕಾರ್ಯಕ್ರಮದಲ್ಲಿ ಖ್ಯಾತ ಹಿರಿಯ ಸಾಹಿತಿ,ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ ಪ್ರಧಾನ್ ಗುರುದತ್ತ, ಶಾಸಕರಾದ ಶ್ರೀವತ್ಸ, ತನ್ವೀರ್‍ಸೇಠ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.