ಸುತ್ತೂರು ಮಠದಿಂದ ಮೃಗಾಲಯಕ್ಕೆ ಕೊಡುಗೆ
ಸಂಜೆವಾಣಿ ನ್ಯೂಸ್
ಮೈಸೂರು:ಆ.25:- ಆ.25ರಂದು ನಡೆಯಲಿರುವ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿಯ ಅಂಗವಾಗಿ ಮಠದಿಂದ ಪ್ರತಿವರ್ಷದಂತೆ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರದ ನಿರ್ವಹಣೆಗಾಗಿ ಒಂದು ಲಕ್ಷ ರೂ.ಗಳ ಚೆಕ್ಕನ್ನು ನೀಡಲಾಯಿತು.
ಶುಕ್ರವಾರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‍ಕುಮಾರ್ ಅವರಿಗೆ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶಕುಮಾರ್, ಕಳೆದ 15 ವರ್ಷಗಳಿಂದ ಪ್ರತಿವರ್ಷವೂ ರಾಜೇಂದ್ರ ಶ್ರೀಗಳ ಜಯಂತಿಯಂದು ಮೃಗಾಲಯದ ಪ್ರಾಣಿಪಕ್ಷಿಗಳ ಆಹಾರ ನಿರ್ವಹಣೆಗಾಗಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಇದರಿಂದ ಮೃಗಾಲಯಕ್ಕೆ ಬಹಳ ಅನುಕೂಲವಾಗುತ್ತದೆ.
ಇದು ಸುತ್ತೂರು ಶ್ರೀಗಳು ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಕಾಳಜಿ ಹೊಂದಿರುವುದನ್ನು ಸೂಚಿಸುತ್ತದೆ. ಇದೇ ರೀತಿ ಬೇರೆ ಬೇರೆ ಸಂಘ ಸಂಸ್ಥೆಗಳು ಸಹಾಯಹಸ್ತ ಚಾಚಬೇಕು ಎಂದು ಕೋರಿದರು.ಜಯಂತಿ ಮಹೋತ್ಸವ ಸಮಿತಿಯ ಸಂಚಾಲಕ ಪ್ರೊ.ಆರ್.ಮೂಗೇಶಪ್ಪ, ಬಿ.ನಿರಂಜನಮೂರ್ತಿ, ಗೋಪಾಲಗೌಡ ಆಸ್ಪತ್ರೆಯ ಡಾ.ಹೆಚ್.ವಿ.ಸಂತೃಪ್ತ್ ಹಾಗೂ ಮೃಗಾಲಯದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.