ಮಲೆ ಮಹದೇಶ್ವರ, ಮಂಟೇಸ್ವಾಮಿ ಮಹಾಕಾವ್ಯಗಳು ಇಂಗ್ಲೀಷ್, ಹಿಂದಿಗೆ ಅನುವಾದಿಸಬೇಕು: ಕವಿ ಎಚ್.ಎಸ್.ಶಿವಪ್ರಕಾಶ್
ಸಂಜೆವಾಣಿ ನ್ಯೂಸ್
ಮೈಸೂರು:ಆ.25:- ಮಲೆ ಮಹದೇಶ್ವರ, ಮಂಟೇಸ್ವಾಮಿ ಮಹಾಕಾವ್ಯಗಳನ್ನು ಇಂಗ್ಲಿಷ್, ಹಿಂದಿಗೆ ಅನುವಾದಿಸಿ ಜಗತ್ತಿಗೆ ಪರಿಚಯಿಸಬೇಕು ಎಂದು ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್ ಮೆಂಟ್, ಕರ್ನಾಟಕ ಜಾನಪದ ಅಕಾಡೆಮಿ, ಮೈಸೂರು ವಿವಿ ಸಮಾಜ ಕಾರ್ಯ ವಿಭಾಗ, ಆಕಾಶವಾಣಿ ಮೈಸೂರು ಸಹಯೋಗದಲ್ಲಿ ವಿಜ್ಞಾನ ಭವನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪರಂ ಜ್ಯೋತಿ ಮಂಟೇಸ್ವಾಮಿ ಒಂದು ಮರುದರ್ಶನ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ3 ಧಾರ್ಮಿಕ ಪರಂಪರೆಗಳಿವೆ. ಮೊದಲನೆಯದು ಸಮಣ, ಬೌದ್ಧ, ಜೈನ ಇವುಗಳು ವೈರಾಗ್ಯ, ಲೋಕಪರವಾದವು. ಎರಡನೆಯದು ಆಚಾರ್ಯ ಪರಂಪರೆ ವೈದಿಕ, ಆಗಮ- ಜಾತಿ, ಕುಲ, ಮೇಲು ಕೀಳು ಇದೆ. ಮೂರನೆಯದು ಇವೆಲ್ಲಗಿಂತ ಮಿಗಿಲಾದದು ಗುರು ಪರಂಪರೆ. ಇಲ್ಲಿ ಜಾತಿ, ಕುಲ, ವಿಧಿ ನಿಯಮಗಳಿಲ್ಲ. ಸರ್ವರನ್ನೂ ಸ್ವೀಕರಿಸುತ್ತದೆ ಎಂದು ಹೇಳಿದರು.
ಕೊಡೇಕಲ್ಲು, ಕಪ್ಪಡಿ, ಚಿಕ್ಕಲ್ಲೂರು ಜಾತ್ರೆಗಳಲ್ಲಿ ಜನರು ಮಹಾ ಪರಂಪರೆಯಲ್ಲಿ ಬದುಕುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಈ ಉತ್ಸವ, ಸಂಭ್ರಮ ಹೆಚ್ಚೆಚ್ಚು ನಡೆಯಬೇಕು ಎಂದು ತಿಳಿಸಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕವಿ ಎಚ್.ಎಸ್. ಶಿವಪ್ರಕಾಶ್ ಅವರ ಮಂಟೇಸ್ವಾಮಿ ನಾಟಕ ಬರೆದು, ದೇವನೂರ ಮಹಾದೇವ ಅವರು ತಮ್ಮ ಕಾದಂಬರಿಯನ್ನು ಮಲೆಯ ಮಹದೇಶ್ವರಗೆ ಅರ್ಪಿಸಿ ಶೈಕ್ಷಣಿಕ ವಲಯಕ್ಕೆ ಅರಿವು ಮೂಡಿಸಿದರು. ದೇವನೂರರು, ಮಲೆಯ ಮಹದೇಶ್ವರರನ್ನು ನೆಲಕ್ಕೆ ತಂದರು. ಹಾಗೇ ತನ್ನ ಪೂರ್ವಿಕ ದೇವರಾಗಿದ್ದ ಎಂಬುದನ್ನು ರೂಪಿಸಿದರು ಎಂದರು.
ನಾವು ಆಧುನಿಕರ ಭ್ರಮೆಯಲ್ಲಿ ಮುಳುಗದೇ ಆಧುನಿಕೋತ್ತರವಾದ ಹಿಮ್ಮುಖ ಚಲನೆಯಲ್ಲಿ ಬಹಳ ಎಚ್ಚರದಿಂದ ನಮ್ಮ ಸಂಸ್ಕೃತಿಯನ್ನು ಮರುರೂಪಿಸಬೇಕಿದೆ. ಅನಿಷ್ಠಗಳನ್ನು ತೊಡೆದು ಭವಿಷ್ಯದ ಕಡೆ ಸಾಗಬೇಕು. ಬೆನ್ನ ಹಿಂದೆ ಮಂಟೇಸ್ವಾಮಿ, ಕಣ್ಮುಂದೆ ಅಂಬೇಡ್ಕರ್ ಇರಿಸಿಕೊಳ್ಳೋಣ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ಧರಾಮಯ್ಯ ಮಾತನಾಡಿ, ಗರ್ಭಗುಡಿಯಲ್ಲಿದ್ದ ದೇವರನ್ನು ಜನರ ಬಳಿಗೆ ತಂದವರು ಬಸವೇಶ್ವರ, ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ, ಚೆನ್ನಾಜಮ್ಮ ಎಂದು ಹೇಳಿದರು.
ಜಾತಿ ವ್ಯವಸ್ಥೆಯಲ್ಲಿ ಮೇಲ್ವರ್ಗದವರು ಮಾತ್ರ ಓದುತ್ತಿದ್ದರು. ಶಾಸ್ತ್ರ ಕಂದಚಾರದ ನಡುವೆ ವೈದಿಕ ಪರಂಪರೆ ಶೂದ್ರ ಸಮುದಾಯವನ್ನು ಗರ್ಭಗುಡಿ ಒಳಗೆ ಇರಲಿ ದೇವಸ್ಥಾನಕ್ಕೂ ಸೇರಿಸುತ್ತಿರಲಿಲ್ಲ. ಇಂತಹ ಸಮಯದಲ್ಲಿ ಮಹದೇಶ್ವರರು, ಮಂಟೇಸ್ವಾಮಿ, ರಾಚಾಪ್ಪಾಜಿ, ಚೆನ್ಮಾಜಮ್ಮ ಜನರೊಂದಿಗೆ ಬೆರೆತು ಆಧ್ಯಾತ್ಮಿಕ ಜ್ಞಾನಕೊಟ್ಟರು ಎಂದು ಹೇಳಿದರು.
ಲಕ್ಷಮಣ್ ಕೌಂಟೆ ಅವರು ಧರೆಗೆ ದೊಡ್ಡವರು ಕಾದಂಬರಿ ಜೊತೆಗೆ ಧರೆಗೆ ತಂದವರು ಪುಸ್ತಕ ಹೊರ ತಂದಿದ್ದಾರೆ. ಮಂಟೇಸ್ವಾಮಿ ಅವರ ಬಗ್ಗೆ ಇತಿಹಾಸ ರೀತಿ ಕಟ್ಟುಕೊಡದೆ ಎಲ್ಲರೂ ಸುಲಭವಾಗಿ ಓದುವಹಾಗೆ ಕಾದಂಬರಿ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ನಮ್ಮ ನಡುವೆಯೇ ಇದ್ದು ಚಾಮರಾಜನಗರ ಕೊಳ್ಳೇಗಾಲ ಭಾಗದಿಂದ ಬಂದ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ, ಚೆನ್ನಾಜಮ್ಮ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕೆಲಸ ಈ ಭಾಗದಲ್ಲಿ ಆಗುತ್ತಿಲ್ಲ. ಇವರ ಬಗ್ಗೆ ಹೆಚ್ಚು ತಿಳಿದುಕೊಂಡು ನಮ್ಮಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಪ್ಪಡಿ ಕ್ಷೇತ್ರದ ಮಠಾಧಿಪತಿ ಎಂ.ಎಲ್.ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮತ್ತು ಕೊಡೇಕಲ್ಲು ಬಸವ ಪೀಠಾಧಿಪತಿ ವೃಷಭೇಂದ್ರ ಅಪ್ಪನವರು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಧರೆಯ ತಂದವರು ಪುಸ್ತಕ ಬಿಡುಗಡೆ ಮಾಡಿದರು. ಚಿಂತಕ ಡಾ. ಮಹಾದೇವ ಶಂಕನಪುರ ಪುಸ್ತಕ ಕುರಿತು ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಆಕಾಶವಾಣಿ ಮೈಸೂರು ನಿಲಯದ ಮುಖ್ಯಸ್ಥ ಉಮೇಶ್ ಎಸ್.ಎಸ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ್ಪ, ಬೋಧಿ ಪ್ರಕಾಶನದ ಅಧ್ಯಕ್ಷ ಸತೀಶ್ ಚಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಉಮೇಶ್, ಡಾ.ಮೈಸೂರು ಗುರುರಾಜ್ ಭಾಗವಹಿಸಿದ್ದರು.
ಮಧ್ಯಾಹ್ನ12.30 ರ ಗೋಷ್ಠಿ 1 ರಲ್ಲಿ ಯುವ ವಿದ್ವಾಂಸ ಡಾ.ಕುಪ್ನಳ್ಳಿ ಎಂ.ಭೈರಪ್ಪ ವಿಶ್ವಾತ್ಮಕ ದೇಸೀಕಥನವಾಗಿ ಮಂಟೇಸ್ವಾಮಿ ಮಹಾಕಾವ್ಯ, ಸಾಹಿತಿ ಪಿ.ನಾಗರತ್ನ ಅವರು ಮಂಟೇಸ್ವಾಮಿ ಕ್ಷೇತ್ರದ ಸಂಶೋಧನಾತ್ಮಕ ನೆಲೆಗಳು ವಿಷಯ ಮಂಡಿಸಿದರು.