ಶ್ರೀ ಕೃಷ್ಣನ ವಿಚಾರಧಾರೆಗಳು ಮಕ್ಕಳಿಗೆ ಪ್ರೇರಣೆಯಾಗಲಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.25- ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವು ಜೀವನ ಸಾರವನ್ನು ತಿಳಿಸುತ್ತದೆ. ಶಿಷ್ಟರ ರಕ್ಷಣೆಗಾಗಿ ದುಷ್ಟರ ಸಂಹಾರ ಮಾಡುವ ಮೂಲಕ ಶ್ರೀಕೃಷ್ಣ ಬಾಲ್ಯದ ಲೀಲೆಗಳು ಮಕ್ಕಳಿಗೆ ಪ್ರೇರಣದಾಯಕವಾಗಲಿದೆ ಎಂದು ವಕೀಲ ಹಾಗು ಪ್ರೇರಣಾ ಟ್ರಸ್ಟ್‍ನ ಕಾರ್ಯದರ್ಶಿ ಶಿವಸ್ವಾಮಿ ತಿಳಿಸಿದರು.
ತಾಲೂಕಿನ ಅಂಕನಶೆಟ್ಟಿಪುರದಲ್ಲಿರುವ ಪ್ರೇರಣಾ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಮಕ್ಕಳಿಗೆ ಕೃಷ್ಣ, ರಾಧೆ ವೇಷ ಭೂಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಹಾಭಾರತ, ರಾಮಾಯಣ ಹಾಗು ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಕೊಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರು ಹಾಗು ಶಿಕ್ಷಕರ ಜವಾಬ್ದಾರಿಯಾಗಿದೆ. ಕಲಿಕೆಯಲ್ಲಿ ಮಕ್ಕಳಿಗೆ ಉತ್ತಮ ನೀತಿ ಪಾಠಗಳು ಹಾಗೂ ಶ್ರೀಕೃಷ್ಣ ಲೋಕ ಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಸಬೇಕು. ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧೆ ವೇಷಭೂಷಣಗಳನ್ನು ಹಾಕುವ ಮೂಲಕ ಅವರಲ್ಲಿ ಉತ್ತಮ ಆಲೋಚನೆ ಮತ್ತು ಶ್ರೀಕೃಷ್ಣನ ಪ್ರೇರಣೆಯಾಗಲಿ ಎಂಬ ಉದ್ದೇಶವನ್ನು ಹೊಂದಿದೆ. ಕೃಷ್ಣಾ ಜನ್ಮಾಷ್ಟಾಮಿಯ ಶುಭಾಶಯಗಳನ್ನು ತಿಳಿಸಿದರು.
ಟ್ರಸ್ಟ್‍ನ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷ್ಣ ಜನ್ಮಾಷ್ಟಮಿಯ ಮಹತ್ವ ಮತ್ತು ಶ್ರೀಕೃಷ್ಣನ ಸಾಧನೆಗಳು ಕುರಿತು ಮಾತನಾಡಿದರು.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್‍ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಶ್ರೀ ಕೃóಷ್ಣ ಮತ್ತು ರಾಧೆಯ ವೇಷ ಭೂಷಣ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಉತ್ತಮವಾಗಿ ಶ್ರೀಕೃಷ್ಣ ವೇಷ ಧರಿಸಿದ್ದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ತೀರ್ಪುಗಾರರಾಗಿ ಮಹದೇವಪ್ರಸಾದ್, ರವಿಕುಮಾರ್, ಸಂಧ್ಯಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ನಟರಾಜನ್, ಮುಖ್ಯ ಶಿಕ್ಷಕ ಎಚ್.ಜಿ. ಮಹೇಶ್‍ಕುಮಾರ್, ಶಿಕ್ಷಕರು, ಹಾಗೂ ಪೋಷಕರು ಉಪಸ್ಥಿತರಿದ್ದರು.