ಅನುಭವದ ಜೊತೆಗೆ ಹೊಸ ತಂತ್ರಜ್ಞಾನದ ಸದ್ಭಳಕೆಗೂ ಮುಂದಾಗಬೇಕು
ಸಂಜೆವಾಣಿ ವಾರ್ತೆ
ದಾವಣಗೆರೆ, ಆ.25;ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಫೋಟೋಗ್ರಾರ್ಸ್‌ ನೂತನ ತಂತ್ರಜ್ಞಾನ, ತಾಂತ್ರಿಕತೆ ಬದಲಾದಂತೆ, ಅದಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗುವ ಮೂಲಕ ತಮ್ಮ ವೃತ್ತಿಯಲ್ಲಿ ಅನುಭವದ ಜೊತೆಗೆ ಹೊಸ ತಂತ್ರಜ್ಞಾನದ ಸದ್ಭಳಕೆಗೂ ಮುಂದಾಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಫೋಟೋಗ್ರಾಫರ್ಸ್‌ಗಳಿಗೆ ಕರೆ ನೀಡಿದರು.ನಗರದ ಬಾಪೂಜಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಫೋಟೋಗ್ರಾಫರ್ಸ್‌ ಮತ್ತು ವೀಡಿಯೋಗ್ರಾಫರ್ಸ್‌ ಸಂಘ, ಫೋಟೋಗ್ರಾಫರ್ಸ್‌ ವೆಲ್‌ಫೇರ್ ಅಸೋಸಿಯೇಷನ್‌ ಆಯೋಜಿಸಿದ್ದ 2 ದಿನಗಳ ದೇವನಗರಿ ಪ್ರೊ.ಇಮೇಜ್-2024 ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಬುದ್ದಿವಂತಿಕೆ ಬಳಸಿಕೊಂಡು, ಕ್ರಿಯಾಶೀಲರಾಗಿ, ವಿವಿಧ ನವನವೀನ ರೀತಿಯ ಹೊಸ ವಿನ್ಯಾಸಗಳ, ಬಗೆಯ ಫೋಟೋಗಳನ್ನು ತೆಗೆದು ಗ್ರಾಹಕರಿಗೆ ನೀಡಿ, ಮೆಚ್ಚುಗೆ ಪಡೆಯಿರಿ ಎಂದರು.ಜನ್ಮದಿನ, ಮದುವೆ, ಗೃಹಪ್ರವೇಶ, ಕ್ರೀಡೆ ಸೇರಿದಂತೆ ಶುಭ ಸಮಾರಂಭಗಳ ನೆನಪು ಕಟ್ಟಿಕೊಡುವ, ಹಳೆ ನೆನಪುಗಳನ್ನು ತಂದುಕೊಡುವ ಕೆಲಸ ಮಾಡುತ್ತೀದ್ದೀರಿ. ವರ್ಲ್ಡ್ ಜಿಯಾಗ್ರಾಫಿ ಚಾನಲ್ ಗಳನ್ನು ನಾವು ನೋಡುತ್ತೇವೆ. ಅದರಲ್ಲಿ ಸಮುದ್ರ, ಪಕ್ಷಿ, ಪ್ರಾಣಿಗಳು, ಪರಿಸರ ಕುರಿತ ಅಂತಹ ಫೋಟೋ, ದೃಶ್ಯಗಳನ್ನು ನಾವು ನೋಡಿ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಫೋಟೋ, ದೃಶ್ಯಗಳು ಮಕ್ಕಳಿಗೆ ಸಹಕಾರಿಯಾಗಲಿವೆ. ಇತಿಹಾಸವೆಂದರೆ ಹಿಂದಿನ ಸ್ವಾತಂತ್ರ್ಯದ ಹೋರಾಟಗಳು, ಸತ್ಯಾಗ್ರಹಗಳನ್ನು ನಾವು ಫೋಟೋಗಳಿಂದ, ವೀಡಿಯೋಗಳಿಂದ ನೋಡಿ ತಿಳಿದುಕೊಳ್ಳುತ್ತಿದ್ದೇವೆ. ಇವೆಲ್ಲಾ ಎಂದಿಗೂ ಮರೆಯದ ಕ್ಷಣಗಳಾಗಿವೆ ಎಂದು ಅವರು ತಿಳಿಸಿದರು.