ರೈತರ ಕಲ್ಯಾಣಕ್ಕಾಗಿ ಪ್ರಾಮಾಣಿಕ ಸೇವೆ ಅಗತ್ಯ: ಡಾ. ಎ. ಭೀಮಪ್ಪ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೫: ರೈತರು ಇಂದು ಸಂಕಷ್ಟದಲ್ಲಿ ಇದ್ದಾರೆ. ನಿರಂತರ ಬರ ಪರಿಸ್ಥಿತಿ ರೈತರ ಆತ್ಮಸ್ಥೆöÊರ್ಯ ಕುಗ್ಗಿಸಿದೆ. ಕಾರಣ ಕೃಷಿ ಪರಿಕರ ಮಾರಾಟಗಾರರು ಕಳಪೆ ಮಟ್ಟದ ಔಷಧ, ಬೀಜ, ಗೊಬ್ಬರಗಳನ್ನು ರೈತರಿಗೆ ನೀಡದೆ, ರೈತರ ಬದುಕು ಹಸನಾಗುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎ. ಭೀಮಪ್ಪ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತಿ ಹತ್ತಿರ ಇರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಕೋರ್ಸಿನ ೨೦೨೨-೨೩ ನೇ ಸಾಲಿನ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾವು ಪಡೆದ ದೇಸಿ ಪದವಿಯನ್ನು ರೈತರ ಅಭ್ಯುದಯಕ್ಕಾಗಿ ಉಪಯೋಗಿಸಬೇಕು. ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಬರುವಂತೆ ಸಲಹೆ ನೀಡಬೇಕೆಂದರು.
ದೇಶಿ ರಾಜ್ಯ ನೋಡಲ್ ಅಧಿಕಾರಿ ಡಾ. ಎಸ್. ಎನ್. ಜಾಧವ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಸಿ ಕೋರ್ಸ್ ಮುಗಿಸಿದ ಎಲ್ಲ ಪರಿಕರ ಮಾರಾಟಗಾರರು ಹೆಚ್ಚಿನ ವೈಜ್ಞಾನಿಕ ಜ್ಞಾನವನ್ನು ವಿವಿಧ ವಿಷಯಗಳಲ್ಲಿ ಪಡೆದಿರುವದರಿಂದ ಅದರ ಸದುಪಯೋಗವನ್ನು ರೈತರಿಗೆ ಒದಗಿಸಬೇಕು. ತಮ್ಮ ಆದಾಯ ಹೆಚ್ಚಿಸಲು ರೈತರಿಗೆ ಮೋಸಮಾಡದೆ ಪ್ರಾಮಾಣಿಕತೆಯಿಂದ ವ್ಯವಹಾರ ಮಾಡಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಔಷಧಿಗಳನ್ನು ತಾವು ಕಲಿತ ಜ್ಞಾನದ ಆಧಾರದ ಮೇಲೆ ಮತ್ತು ಕೃಷಿ ತಜ್ಞರ ಸಲಹೆ ಪಡೆದು ಮಾರಾಟ ಮಾಡಿ ಲಾಭಗಳಿಸಬೇಕೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ಮಾತನಾಡಿ, ದೇಶದಲ್ಲಿ ರೈತರಿಗೆ ಹೆಚ್ಚು ನಿಕಟವಾಗಿರುವ ಕೃಷಿ ಪರಿಕರ ಮಾರಾಟಗಾರರು ಸಮಾನಾಂತರ ವಿಸ್ತರಣಾ ಕಾರ್ಯಕರ್ತರಾಗಿ ರೈತರಿಗೆ ವಿವಿಧ ಕೃಷಿ ತಂತ್ರಜ್ಞಾನ ಹಾಗೂ ಪರಿಕರಗಳ ವಿತರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಮಣ್ಣು ಮತ್ತು ನೀರಿನ ಸಂರಕ್ಷಣೆ, ಸುಸ್ಥಿರ ಕೃಷಿ ಮತ್ತು ಸ್ವಾವಲಂಬಿ ಕೃಷಿ ವಿಧಾನಗಳಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಲು ರೈತ ಸಮುದಾಯಕ್ಕೆ ಸಹಾಯ ಮಾಡಬೇಕೆಂದು ಕರೆ ನೀಡಿದರು.
ಕೃಷಿ ಪರಿಕರ ಮಾರಟಗಾರರು ತಮ್ಮ ಮಳಿಗೆಯಲ್ಲಿ ಎಕ್ಸಟೆನ್ಸನ್ ಕಾರ್ನರ್‌ನ್ನು ಅಳವಡಿಸಿ ಡಿಜಿಟಲ್ ಡಿಸಪ್ಲೇ ಬೋರ್ಡ್ಗಳನ್ನು ಅಳವಡಿಸಬೇಕೆಂದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಬೆಂಗಳೂರಿನ ವ್ಯವಸ್ಥಾಪನಾ ಮಂಡಳಿ ಸದಸ್ಯ ವ್ಹಿ.ಎಸ್. ಪಾಟೀಲ ಮಾತನಾಡಿ, ದೇಸಿ ಕೋರ್ಸ್ ಮುಗಿಸಿದ ಎಲ್ಲ ಪರಿಕರ ಮಾರಾಟಗಾರರು ರೈತರ ಏಳಿಗೆಗಾಗಿ ಶ್ರಮಿಸಿ, ಸೂಕ್ತ ತಾಂತ್ರಿಕ ತಂತ್ರಜ್ಞಾನಗಳನ್ನು ರೈತರಿಗೆ ಒದಗಿಸಿ, ಹೆಚ್ಚಿನ ಲಾಭ ಪಡೆಯಲು ಸಹಕರಿಸಬೇಕು. ರೈತರಿಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ವ್ಯವಹಾರ ಮಾಡಬೇಕೆಂದು ಸಲಹೆ ನೀಡಿದರು.
ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಈಗಾಗಲೇ ೧೫೮ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. ದೇಸಿ ಕೋರ್ಸ್ನ್ನು ಮುಗಿಸಿದ ಎಲ್ಲ ಪರಿಕರ ಮಾರಾಟಗಾರರು ರೈತ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ಎಸ್. ಎಸ್. ಭಂಟನೂರ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಹೆಚ್ಚಿನ ಲಾಭಕ್ಕಾಗಿ ಆಶಿಸದೇ ರೈತರಿಗೆ ಯೋಗ್ಯವಾಗುವ ದರದಲ್ಲಿ ಗೊಬ್ಬರ ಮತ್ತು ಔಷಧಿ ವಿತರಿಸಿ ಅವರ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದರು.
ಇದೇ ಸಂದರ್ಭದಲ್ಲಿ ದೇಸಿ ಕಾರ್ಯಕ್ರಮದಲ್ಲಿ ಅಧಿಕ ಅಂಕ ಪಡೆದ ಸಿದ್ದಪ್ಪ ಹಂಜಗಿ, ಮರುಳಸಿದ್ದ ಬಿರಾದಾರ ಮತ್ತು ಪರಮಾನಂದ ಕೋರಿ ಅವರನ್ನು ಸನ್ಮಾನಿಸಲಾಯಿತು.
ಬಿ.ಜಿ. ಸಜ್ಜನ ಸ್ವಾಗತಿಸಿದರು. ಬಿರಾದಾರ ನಿರೂಪಿಸಿದರು. ಷಡಕ್ಷರಿಮಠ ವಂದಿಸಿದರು.