ಆ. ೨೭ ರಂದು ರಾಜ್ಯಪಾಲ ನಡೆ ಖಂಡಿಸಿ ರಾಜಭವನ ಚೆಲೋ: ಗಣಿಹಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೫: ರಾಜ್ಯಪಾಲರ ನಡೆ ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನೇತೃತ್ವದಲ್ಲಿ ಆ.೨೭ ರಂದು ಬೆಳಗ್ಗೆ ೧೧ ಗಂಟೆಗೆ ರಾಜಭವನ ಚೆಲೋ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಾಗ ಸಂವಿಧಾನ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ರಾಜಭವನವನ್ನು ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಚೇರಿಯನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಲೋಕಾಯುಕ್ತ, ಎಸ್‌ಐಟಿ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಹಾಗೂ ಮುರುಗೇಶ ನಿರಾಣಿ ಅವರ ಭ್ರಷ್ಟಾಚಾರದ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳು ಕಳೆದರೂ ಈ ಬಗ್ಗೆ ರಾಜ್ಯಪಾಲರು ಯಾವುದೇ ರೀತಿಯ ಅನುಮತಿ ನೀಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ನೀಡಿದ ಪ್ರಾಸಿಕ್ಯೂಷನ್ ಅನುಮತಿ ತರಾತುರಿಯದ್ದಾಗಿದೆ ಎಂದು ದೂರಿದರು.
ಆದ್ದರಿಂದ ರಾಜ್ಯಪಾಲರ ಈ ತಾರತಮ್ಯ ನಡೆ ಖಂಡಿಸಿ ಆ. ೨೭ರಂದು ಬೆಂಗಳೂರಿನ ಸ್ವತಂತ್ರö್ಯ ಉದ್ಯಾನದಿಂದ ರಾಜಭವನಕ್ಕೆ ಬೃಹತ್ ಪ್ರಮಾಣದಲ್ಲಿ ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸೇರಿದಂತೆ ಹಲವು ಸಮುದಾಯದ ಲಕ್ಷ ಲಕ್ಷ ಜನರು ಪಾಲ್ಗೊಳ್ಳಲಿದ್ದು, ಜಿಲ್ಲೆಯಿಂದ ಸಾವಿರಾರು ಜನರು ತೆರಳಲಿದ್ದಾರೆ ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಯಾವುದೇ ರೀತಿಯ ಅವ್ಯವಹಾರ ಮಾಡಿಲ್ಲ. ಅಲ್ಲದೆ ಈ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಸಲು ಸಿದ್ಧರಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ನವರು ಕೇವಲ ರಾಜಕೀಯ ಮಾಡುತ್ತ, ಮುಖ್ಯಮಂತ್ರಿಗಳ ರಾಜಿನಾಮೆ ಕೇಳುತ್ತಿರುವುದು ಖಂಡನೀಯ ಎಂದು ಹೇಳಿದರು.
ಮುಖಂಡರಾದ ಡಾ. ರವಿ ಬಿರಾದಾರ, ಸಂಜು ಕಂಬಾಗಿ, ಫಯಾಜ್ ಕಲಾದಗಿ, ಮಲ್ಲು ಬಿದರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.