ವಿಶೇಷ ಅನುದಾನ ಬಿಡುಗಡೆಗೆ ರಾಜ್ಯಪಾಲರಿಗೆ ಶಾಸಕ ಡಾ.ಬೆಲ್ದಾಳೆ ಮನವಿ
ಬೀದರ,ಆ 24:ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ಅನುದಾನದಲ್ಲಿ ರಾಜ್ಯಪಾಲರ ವಿವೇಚನ ವಿಶೇಷ ಕೋಟಾದಡಿಯಲ್ಲಿ ವಿಶೇಷ ಅನುದಾನವನ್ನು ಬೀದರ್ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಮಂಜೂರು ಮಾಡುವಂತೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮನವಿ ಸಲ್ಲಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಣದೂರ ಗ್ರಾಮದ ಹೊರವಲಯದಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಬೀದರ್ ಪ್ರಾದೇಶಿಕ ಕೇಂದ್ರದ ಆಡಳಿತ ಭವನದ ಕಟ್ಟಡಕ್ಕೆ ಅನುದಾನ ಮಂಜೂರು ಮಾಡುವಂತೆ ಹಾಗೂ ಜಿಲ್ಲೆಯ ಹೊರವಲಯದಲ್ಲಿರುವ ಕಮಠಾಣ ಗ್ರಾಮದ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಮತ್ತು ಬೀದರ್ ವಿಶ್ವವಿದ್ಯಾಲಯಕ್ಕೆ ಅನುದಾನ ಮಂಜೂರು ಮಾಡಿ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವಂತೆ ಶಾಸಕರು ಮನವಿ ಮಾಡಿದರು.