ಮಳಖೇಡ್ ಸೇತುವೆ ಲೋಕಾರ್ಪಣೆ:ಜನ ಸೇವೆಗೆ ನಮ್ಮ ಸರ್ಕಾರ ಸದಾ ಬದ್ಧ:ಡಾ.ಶರಣಪ್ರಕಾಶ ಪಾಟೀಲ
ಕಲಬುರಗಿ:ಆ.24:ಕಲಬುರಗಿ-ಸೇಡಂ ರಸ್ತೆಯ ಮಳಖೇಡ್ ಗ್ರಾಮದ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ 27.90 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾದ ಸೇತುವೆಯನ್ನು ಶನಿವಾರ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಿಂದೆ 2018ರಲ್ಲಿ ತಾವೇ ಇದಕ್ಕೆ ಅಡಿಗÀಲ್ಲು ನೆರವೇರಿಸಿದ್ದು, ಇದೀಗ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಅತಿವೃಷ್ಠಿ ಪ್ರವಾಹ ಸಂದರ್ಭದಲ್ಲಿ ಪ್ರತಿ ಬಾರಿ ಮಳಖೇಡ್ ಸೇತುವೆ ಮುಳಗಡೆಯಾಗಿ ಸಂಪರ್ಕ ಕಡಿತ ಸಾಮಾನ್ಯವಾಗಿತ್ತು. ನೂತನ ಸೇತುವೆ ನಿರ್ಮಾಣದಿಂದ ಸುಗಮ ಸಂಚಾರ ಸಾಧ್ಯವಾಗಲಿದೆ ಎಂದರು.
ನೂತನ ಮತ್ತು ಹಳೇ ಸೇತುವೆ ಎರಡು ಸಂಚಾರಕ್ಕೆ ಮುಕ್ತವಾಗಿರಿಸಬೇಕು. ಸೇತುವೆ ಮೇಲೆ ಅಪಘಾತವಾಗದಂತೆ ಡಿವೈಡರ್ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಜನಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂಬುದಕ್ಕೆ ಇಂತಹ ಅಭಿವೃದ್ಧಿ ಕಾರ್ಯಗಳೆ ಸಾಕ್ಷಿ ಎಂದರು.
ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತಿವೆ. ಬಡವರ ಬದುಕು ಗಟ್ಟಿಗೊಳಿಸಿವೆ. ನೆಮ್ಮದಿಯ ಜೀವನಕ್ಕೆ ಗ್ಯಾರಂಟಿ ಯೋಜನೆಗಳು ಕಾರಣವಾಗಿವೆ ಎಂದು ತಮ್ಮ ಸರ್ಕಾರದ ಜನಪರ ಸಾಧನೆಗಳನ್ನು ಹೇಳಿಕೊಂಡರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮತದ ಅನುದಾನದಿಂದ ನಿರ್ಮಿಸಲಾದ ಈ ಸೇತುವೆ 12 ಮೀಟರ್ ಅಗಲ ಮತ್ತು 270 ಮೀಟರ್ ಉದ್ದ ಹೊಂದಿದೆ. ಸೇತುವೆಗೆ ಎರಡು ಬದಿಯಲ್ಲಿ ಒಟ್ಟಾರೆ 390 ಮೀಟರ್ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಬೆಂಗಳೂರಿನ ಎನ್.ಸಿ.ಸಿ ಲಿಮಿಟೆಡ್ ಸಂಸ್ಥೆಯು ನಿರ್ಮಾಣದ ಜವಾಬ್ದಾರಿ ಪಡೆದು ಮಾರ್ಚ್ 2018 ರಲ್ಲಿ ಕೆಲಸ ಪ್ರಾರಂಭಿಸಿ ಇದೀಗ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ ಇದ್ದರು.