ಆದರ್ಶ- ಪ್ರಾಮಾಣಿಕ ಮಾರ್ಗದಲ್ಲಿ ಸಾಗೋಣ: ಸಚಿವ ಡಿ.ಸುಧಾಕರ್
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಅ.02: ಸತ್ಯ, ಅಹಿಂಸೆ, ತ್ಯಾಗ, ಬಲಿದಾನ ಮತ್ತು ಸರಳತೆ ಎಂಬ ಪದಗಳಿಗೆ ಅರ್ಥವಂತಿಕೆಯನ್ನು ತಂದು ಕೊಟ್ಟಂತಹ ಮಹನೀಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಅವರು ಎಂದು ಯೋಜನೆ, ಸಾಂಖ್ಯಿಕ ಇಲಾಖೆ ಮತ್ತು ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರೀಜಿ ರವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು‌.ಇಬ್ಬರು ಮಹಾನೀಯರು ಭಾರತದ ರಾಜಕೀಯ ಸ್ವಾತಂತ್ರ್ಯಕ್ಕೆ, ದೇಶದ ಶ್ರೀ ಸಾಮಾನ್ಯರ ಶ್ರೇಯೋಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಈರ್ವರೂ ಮಹನೀಯರ ವಯಸ್ಸಿನ ಅಂತರ ಸುಮಾರು 35 ವರ್ಷಗಳಾಗಿದ್ದರೂ, ಇಬ್ಬರು ಬದುಕಿದ ರೀತಿ, ಅವರ ತತ್ವಾದರ್ಶಗಳು ಒಂದೇ ರೀತಿಯಾಗಿದ್ದು, ಇಂದಿಗೂ ನಮಗೆಲ್ಲರಿಗೂಆದರ್ಶಪ್ರಾಯವಾದವುಗಳಾಗಿವೆ.ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ತಮ್ಮ ಜೀವನದುದ್ದಕ್ಕೂ ನುಡಿದಂತೆ ನಡೆದರು. ತಾವು ಯಾವ ಆದರ್ಶಗಳನ್ನು ಪ್ರತಿಪಾದಿಸಿದರೋ ಅದರಂತೆಯೇ ಬದುಕಿ ತೋರಿಸಿದರು. ಸರಳತೆಯನ್ನೇ ಮೈಗೂಡಿಸಿಕೊಂಡಿದ್ದ ಈರ್ವರು ಸದಾ ದೇಶದ ಒಳಿತಿಗಾಗಿ, ಜನಸಾಮಾನ್ಯರ ಉನ್ನತಿಗಾಗಿ ಶ್ರಮಿಸಿದರು ಎಂದರು.