ಐವರು ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ
ಕಲಬುರಗಿ,ಆ 24: ಉದ್ಯಮಿ ಎಸ್ ಎಸ್ ಪಾಟೀಲ ಅವರಿಗೆ ಜಿಲ್ಲೆ ಸೇರಿದಂತೆ ದೇಶ ವಿದೇಶಗಳಲ್ಲಿ ಔದ್ಯೋಗಿಕ ಕ್ರಾಂತಿ ಮಾಡಿದ ಕೀರ್ತಿ ಸಲ್ಲುತ್ತದೆ.ಅವರ ಕಾಯಕಸೇವೆ ಉದ್ಯಮಿಗಳಿಗೆ ಮೇಲ್ಪಂಕ್ತಿಯಾಗಿದೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.
ನಗರದ ಡಾ.ಎಸ್ ಎಂ ಪಂಡಿತರಂಗಮಂದಿರದಲ್ಲಿ ಎಸ್ ಆರ್ ಪಾಟೀಲ ಫೌಂಡೇಶನ್,ಪಾಟೀಲ್ ಗ್ರೂಫ್ ಆಫ್ ಇಂಡಸ್ಟ್ರೀಜ್ ವತಿಯಿಂದ ಆಯೋಜಿಸಿದ ಕರ್ಮಯೋಗಿ ದಿ.ಡಾ. ಎಸ್ ಎಸ್ ಪಾಟೀಲರ ದ್ವಿತೀಯ ಪುಣ್ಯಸ್ಮರಣೆ ಹಾಗೂ ರಾಜ್ಯ ಮಟ್ಟದ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸುವದರ ಜೊತೆಗೆ ಉದ್ಯೋಗ ಒದಗಿಸಿಕೊಡುತ್ತಿದ್ದರು ಎಂದರು. ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 9 ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಸಾನಿಧ್ಯ ವಹಿಸಿದ್ದರು.ರೇವಣಸಿದ್ದಪ್ಪ ಜಿ ಪಾಟೀಲ,ಡಾ ಲಿಂಗರಾಜ ಎಸ್ ಪಾಟೀಲ, ಸಿದ್ದಲಿಂಗ ಎಸ್ ಪಾಟೀಲ ಸೇರಿದಂತೆ ಹಲವಾರು ಗಣ್ಯರು,ಕುಟುಂಬಸ್ಥರು ಉಪಸ್ಥಿತರಿದ್ದರು.
ಕರ್ಮಯೋಗಿ ಪ್ರಶಸ್ತಿ:
ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು,ಉದ್ಯಮಿ ಎನ್.ಕೆ ಮಾಲು, ಖ್ಯಾತ ಕಲಾವಿದ ಡಾ. ವಿ ಜಿ ಅಂದಾನಿ, ಸಾಹಿತಿ ಪ್ರೊ ಅಲ್ಲಮಪ್ರಭು ಬೆಟ್ಟದೂರು ಮತ್ತು ತಜ್ಞ ವೈದ್ಯೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಅವರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.