ನಾಳೆ ಗಜಲ್ ಸಾಹಿತ್ಯ ಸಮ್ಮೇಳನ: ಗಮನ ಸೆಳೆದ ಸಂವಾದ
ಕಲಬುರಗಿ,ಆ 24: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆಯಲಿರುವ ಅಖಿಲ ಕರ್ನಾಟಕ ಗಜಲ್ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಇಲ್ಲಿನ ಪತ್ರಿಕಾ ಭವನದಲ್ಲಿ ಸಮ್ಮೇಳನಾಧ್ಯಕ್ಷೆ ಪ್ರಬಾವತಿ ದೇಸಾಯಿ ಅವರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್.ದೇಸಾಯಿ ಅವರು ಮೊದಲು ಮಾತನಾಡಿ, ಹೃದಯದಿಂದ ಬಂದು ಮತ್ತೊಂದು ಹೃದಯಕ್ಕೆ ಮುಟ್ಟಿಸುವ ಸಾಹಿತ್ಯವಾಗಿದ್ದು, ಅದರಲ್ಲಿ ಅವರವರ ಭಾವಕ್ಕೆ ಅರ್ಥವಾಗುವ ಅನುಭೂತಿ ಇರುತ್ತದೆ ಎಂದರು.
ಅವರವರ ಆಳಕ್ಕೆ ತಕ್ಕಂತೆ ಗಜಲ್ ಅರ್ಥವಾಗುತ್ತಾ ಹೋಗುತ್ತದೆ. ಗಜಲ್ ಪ್ರಕಾರ ಕನ್ನಡ ಸಾಹಿತ್ಯದಲ್ಲಿ ಅಷ್ಟೊಂದು ಪ್ರಚಲಿತದಲ್ಲಿ ಇರಲಿಲ್ಲ. ಆದರೆ, ಈಗ ಬಹಳಷ್ಟು ಸಾಹಿತಿಗಳು ಗಜಲ್ ರಚಿಸುತ್ತಿದ್ದಾರೆ ಎಂದರು.
ಉರ್ದು ಭಾಷೆ, ಉರ್ದು ಕಾವ್ಯ ಗಜಲ್ ಪಾಲಿನ ರಾಣಿ ಎಂದು ವ್ಯಾಖ್ಯಾನಿಸಿದ ಅವರು, ಈಗ ಕನ್ನಡ ಸಾಹಿತ್ಯಕ್ಕೂ ಗಜಲ್ ಸ್ಪರ್ಶ ಲಭಿಸಿರುವುದು ಸಂತಸ ತಂದಿದೆ ಎಂದು ನುಡಿದರು.
ಸಾಹಿತಿ ಅಬ್ದುಲ್ ಹೈ ತೋರಣಗಲ್ಲು ಮಾತನಾಡಿ, ಗಜಲ್ ಸಾಹಿತ್ಯ ರಚನೆಗೆ ಛಂದೋಬದ್ಧವಾದ ನಿಯಮಗಳಿವೆ. ಕನ್ನಡ ಗಜಲ್ ರಚನೆಕಾರರು ಸಹ ಇಂತಹ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಿದರೆ ಕನ್ನಡ ಗಜಲ್ ಸಾಹಿತ್ಯ ಶ್ರೀಮಂತಗೊಳ್ಳುತ್ತದೆ. ಹಾಗಾಗಿ, ಕನ್ನಡ ಗಜಲ್ ರಚನೆಗೆ ಅಂಪೈರಿಂಗ್ ವ್ಯವಸ್ಥೆಯ ಅಗತ್ಯವಿದೆ ಎಂದರು.
ಸಾಹಿತಿ ಬೋಡೆ ರಿಯಾಜ್ ಅಹ್ಮದ್ ಮಾತನಾಡಿ, ಉರ್ದು ಭಾಷೆಯ ಜ್ಞಾನ ಮತ್ತು ಛಂದೋಲಂಕಾರಗಳ ಜ್ಞಾನವಿದ್ದರೆ ಗಜಲ್ ಸಾಹಿತ್ಯಕ್ಕೆ ನ್ಯಾಯ ದೊರಕಿಸುವುದು ಸಾಧ್ಯವಾಗುತ್ತದೆ ಎಂದು ನುಡಿದರು.
ಕರ್ನಾಟಕ ಗಜಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಫಾಮ್ರ್ಯಾಟ್ ಮರೆತು ಗಜಲ್ ರಚಿಸುವುದಾದರೆ ಅದು ಗಜಲ್ ಎನಿಸಿಕೊಳ್ಳುವುದಿಲ್ಲ ಎಂದು ಕಿವಿಮಾತು ಹೇಳಿದರು.
ಮಕ್ಕಳ ತಜ್ಞ ಡಾ.ಶ್ರೀಶೈಲ ಮಾದಣ್ಣನವರ್ ಮಾತನಾಡಿ, ಗಜಲ್ ಸಾಹಿತ್ಯ ರಚನೆಗೆ ವ್ಯಾಕರಣ ಎಷ್ಟು ಮುಖ್ಯವೋ ಅದು ಗಾಯನಕ್ಕೆ ಅನುಕೂಲ ಆಗುವಂತೆ ಕಾವ್ಯರೂಪದಲ್ಲಿರಬೇಕು ಎಂದು ಸಲಹೆ ನೀಡಿದರು.ಮಂಗಳೂರಿನ ಡಾ.ಸುರೇಶ್ ನೆಗಳಗುಳಿ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಗಜಲ್ ಸಾಹಿತ್ಯದ ಮೇಲೆ ಮಹಾಪ್ರಬಂಧ ಮಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪಡೆದ ಡಾ.ಪ್ರೇಮಾ ಹೂಗಾರ್ ಅವರು ಸಂವಾದ ಕಾರ್ಯಕ್ರಮದಲ್ಲಿ ಕೆಲವು ಗಜಲ್ ಗಳನ್ನು ಪ್ರಸ್ತುತ ಪಡಿಸಿದರು.ಹಾ.ಮಾ.ಸತೀಶ್, ನೂರ್ ಅಹ್ಮದ್, ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ನಂರುಶಿ ಕಡೂರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಡಾ.ಕಪಿಲ್ ಚಕ್ರವರ್ತಿ ನಿರೂಪಿಸಿದರು.