ವಿಶ್ವ ಬುಡಕಟ್ಟು ದಿನಾಚರಣೆ
ಕಲಬುರಗಿ:ಆ.24: ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ಕಲಬುರಗಿ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಜಾಫರಬಾದ ವತಿಯಿಂದ “ವಿಶ್ವ ಬುಡಕಟ್ಟು ದಿನಾಚರಣೆ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಸುನಿಲಕುಮಾರ ವಂಟಿ ಅವರು ಡೋಲು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬುಡಕಟ್ಟು ಜನರು ಮೂಲ ಜಾನಪದ ಕಲಾವಿದರು. ಬುಡಕಟ್ಟು, ಅಲೆಮಾರಿಗಳು ತಮ್ಮಲ್ಲಿರುವ ಮೂಲ ಜಾನಪದ ಕಲೆಯನ್ನು ಪ್ರದರ್ಶನ ಮಾಡಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುವವರು. ಇವರು ವೃತ್ತಿ ಕಲಾವಿದರು, ಬದುಕು ಸಾಗಿಸಲು ಇವರಿಗೆ ಕಲಾ ವೃತ್ತಿಯೇ ಆಸರೆ. ಈಗಿನ ಡಿಜಿಟಲ್ ಯುಗದಲ್ಲಿ ಇವರ ಕಲೆಗೆ ಬೆಲೆ ಇಲ್ಲದೆ ಇವರು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಇವರ ಬದುಕಿಗೆ ಆಸರೆಯಾಗಿ ಸರಕಾರ ಇವರತ್ತ ಗಮನಹರಿಸಿ ಇವರ ಕಲೆಗೆ ತಕ್ಕ ಬೆಲೆಕೊಟ್ಟು ಇವರ ಬದುಕಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದರು. ಇವರಿಗೆ ಸಹಕಾರ ನೀಡದಿದ್ದರೆ, ಮೂಲ ಜಾನಪದ ಕಲಾವಿದರನ್ನು ಕಳೆದುಕೊಂಡಂತಾಗುತ್ತದೆ ಎಂದು ನುಡಿದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸಯ್ಯ ಅವರು ಮಾತನಾಡುತ್ತ ಜಾನಪದ ಕಲಾ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇದೆ. ಪೂರ್ವಜರ ಜನಪದ ಹಾಡುಗಳನ್ನು ಹಾಡುವ ಮೂಲಕ ತಮ್ಮ ದೈನಂದಿನ ಬದುಕಿನಲ್ಲಿ ಖುಷಿಯನ್ನು ಕಾಣುತ್ತಿದ್ದಾರೆ ಎಂದು ಹೇಳುವ ಮೂಲಕ ಅನೇಕ ಜಾನಪದ ಹಾಡುಗಳನ್ನು ಹಾಡುತ್ತಾ ಮಕ್ಕಳಿಗೆ ಕಲಿಯುವಂತೆ ಪ್ರೇರೇಪಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ ಯಳವಾರ, ದೇವಿಂದ್ರಪ್ಪ ಗಣಮುಖಿ, ಬಸಯ್ಯಸ್ವಾಮಿ ಹೊದಲೂರ ಮಾತನಾಡಿದರು. ಶ್ರೀಮತಿ ಶಶಿಕಲಾ ಚೌವ್ಹಾಣ, ಸರಿತಾ ಇವರು ಜಾನಪದ ಹಾಡು ಹಾಡುವ ಮೂಲಕ ಜನಮನ ಸೆಳೆದರು.
ಪರಿಷತ್ತಿನ ಅಧ್ಯಕ್ಷರಾದ ಎಂ.ಬಿ.ನಿಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸಿದ್ದು ಯಾನಗುತ್ತ, ಸಹ ಶಿಕ್ಷಕರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುನಂದಾ, ಶ್ರೀಮತಿ ಶಿವಲೀಲಾ, ಶ್ರೀಮತಿ ಆಶಾ ಕುಲಕರ್ಣಿ, ಶ್ರೀಮತಿ ಸುಧಾ, ಶ್ರೀಮತಿ ಗಂಗುಬಾಯಿ, ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಾವಿದರಿಗೆ ಸನ್ಮಾನ ಹಾಗೂ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು.