ವಿದ್ಯಾರ್ಥಿಗಳಲ್ಲಿ ಓದಿನ ಹಸಿವು ಹೆಚ್ಚಾಗಲಿ: ರಾಜೇಶ್ವರಿ
ಅಫಜಲಪುರ: ಆ.24:ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದ್ದು, ಸಮೃದ್ದವಾದ ಬದುಕು ನಿಮ್ಮದಾಗಬೇಕಾದರೆ ಈಗ ನಿಮ್ಮಲ್ಲಿ ಓದಿನ ಹಸಿವು ಹೆಚ್ಚಾಗಬೇಕು ಎಂದು ಹಿರಿಯ ಪ್ರಾಧ್ಯಾಪಕಿ ಎಂ.ಎಸ್ ರಾಜೇಶ್ವರಿ ಹೇಳಿದರು.
ಪಟ್ಟಣದ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ಡಾ. ಎಸ್.ಆರ್ ರಂಗನಾಥನ್ ಅವರ 132ನೇ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಪಂಚದಲ್ಲಿ ದೊಡ್ಡ ಸಾಧನೆ ಮಾಡಿದವರೆಲ್ಲ ಪುಸ್ತಕಗಳನ್ನು ಹೆಚ್ಚು ಓದಿದವರಾಗಿದ್ದಾರೆ. ಹೀಗಾಗಿ ನೀವು ಬದುಕಿನಲ್ಲಿ ಅಂದುಕೊಂಡ ಗುರಿ ಸಾಧನೆ ಮಾಡಬೇಕಾದರೆ ಪುಸ್ತಕಗಳನ್ನು ಸದಾ ಸಂಗಾತಿಗಳಂತೆ ಮಾಡಿಕೊಳ್ಳಬೇಕು. ನಮ್ಮ ಕಾಲೇಜಿನಲ್ಲಿ ಸಾಕಷ್ಟು ಅತ್ಯಮೂಲ್ಯ ಪುಸ್ತಕಗಳು ಲಭ್ಯವಿದ್ದು ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಿಕಾರ್ಜುನ ಗಣಾಚಾರಿ ಮಾತನಾಡುತ್ತಾ ಇದು ಸ್ಪರ್ಧಾತ್ಮಕ ಯುಗ. ಹೀಗಾಗಿ ನೀವು ಎಷ್ಟು ಹೆಚ್ಚು ಓದುತ್ತೀರಿ ಅಷ್ಟು ಸಫಲತೆ ಸಾಧಿಸುತ್ತೀರಿ. ಹೀಗಾಗಿ ಕಾಲೇಜಿನ ಅವಧಿ ಮುಗಿದ ಬಳಿಕವೂ ನೀವು ಪುಸ್ತಕಗಳೊಂದಿಗೆ ಹೆಚ್ಚು ಸಮಯ ಕಳೆಯಿರಿ ಎಂದು ಸೂಚಿಸಿದರು.
ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಓದುವ ಹವ್ಯಾಸ ಎಲ್ಲರಲ್ಲೂ ಬರಬೇಕಾದರೆ ಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಿ. ಹೀಗಾದಾಗ ಮಾತ್ರ ಉನ್ನದ ಗುರಿಗಳನ್ನು ತಲುಪಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಐಕ್ಯೂಎಸಿ ಸಂಯೋಜಕ ಡಾ. ಸಂತೋಷ ಹುಗ್ಗಿ, ಗ್ರಂಥಪಾಲಕಿ ಡಾ. ಸಾವಿತ್ರಿ ಕೃಷ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಸೂಗೂರೇಶ್ವರ ಆರ್.ಎಂ, ಡಾ. ಮಹ್ಮದ್ ಯೂನೂಸ್, ಡಾ. ಸಂಗಣ್ಣ ಸಿಂಗೆ, ಡಾ. ದತ್ತಾತ್ರೇಯ, ಡಾ. ಭಾರತಿ, ವೈಜನಾಥ ಭಾವಿ, ಡಾ.ವಿನಾಯಕ ಕುಲಕರ್ಣಿ, ಡಾ. ಸೂರ್ಯಕಾಂತ ಉಮಾಪುರ, ಹೀರೂ ರಾಠೋಡ, ಶರಣಬಸವೇಶ್ವರ, ಗೌರಿಶಂಕರ ಭುರೆ, ಶ್ರೀದೇವಿ ರಾಠೋಡ, ಮಡಿವಾಳಪ್ಪ ಮುಗಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.